ಮೈಸೂರು ದಸರಾ ಹಬ್ಬದ ಕಲೆಗಿಲ್ಲ ಕಡಿವಾಣ

ಮೈಸೂರು ದಸರಾ ಹಬ್ಬದ ಕಲೆಗಿಲ್ಲ ಕಡಿವಾಣ

Anto Christan   ¦    Oct 22, 2020 10:05:08 AM (IST)
 ಮೈಸೂರು ದಸರಾ ಹಬ್ಬದ ಕಲೆಗಿಲ್ಲ ಕಡಿವಾಣ

ದಸರ ಇದು ನಾಡಹಬ್ಬ. ಕೇವಲ ಮೈಸೂರಷ್ಟೇ ಅಲ್ಲದೆ ಊರ ಪರೂರ ಜನರ ಚಿತ್ತಾಕರ್ಷಣೆಯನ್ನು ಮಾಡಲ್ಲ ಈ ದಸರಾಗೆ ಈ ಬಾರಿ ಕೊರೋನ ಸಣ್ಣಮಟ್ಟಿನ ಕಡಿವಾಣವನ್ನು ಹಾಕಿದೆ.‌

ಈ ಬಾರಿ ದಸರಾ ಆಚರಣೆಗೆ ಅದರದ್ದೇ ಆತ ಮಿತಿಯನ್ನು ಹಾಕಲಾಗಿದೆಯಾದರು ಒಂದು ವಿಭಿನ್ನ ಪ್ರಯತ್ನದ ಮುಖಾಂತರ ದಸರ ಹಬ್ಬ ಹಾಗೂ ವೀಕ್ಷಣೆಯ ಅನುಭವವನ್ನು ಪ್ರವಾಸಿಗರಿಗೆ ಹಾಗೂ ಮೈಸೂರಿನ ಜನರಿಗೆ ಕಲಾಕೃತಿಗಳ ಮುಖಾಂತರ ನೀಡಲಾಗುತ್ತಿದೆ. ಕೋವಿಡ್ ಕಾಲದಲ್ಲಿ ನಾಡ ಹಬ್ಬ ಎಂದಿನಂತೆ ಆಚರಿಸುವುದು ಜನರ ಹಿತಕ್ಕೆ ಸೂಕ್ತವಲ್ಲ. ‌‌

ಆದರೂ ದಸರಾದಲ್ಲಿ ಜನರಿಗೆ ಪ್ರತ್ಯೇಕ ಅನುಭವ ಒದಗಿಸುವ ನಿಟ್ಟಿನಲ್ಲಿ ದಸರದ ಸಿದ್ಧತೆಗಳು ಮೈಸೂರಿನಲ್ಲಿ ಪ್ರಾರಂಭವಾಗಿದೆ. ನಾಡಹಬ್ಬ ದಸರದ ಪ್ರಮುಖ ಭಾಗ ದರ್ಬಾರ್ ಹಾಲಿನಲ್ಲಿ ಮೈಸೂರು ರಾಜರ ನೇತೃತ್ವದಲ್ಲಿ ನಡೆಯುವ ಪೂಜೆ ಹಾಗೂ ಗೌರವ ಸಮರ್ಪಣೆ. ಅರಮನೆಯ ದರ್ಬಾರ್ ಹಾಲ್ ದಸರೆಯ ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು ಇದನ್ನು ಬ್ರಿಟೀಷ್ ವಾಸ್ತುಶಿಲ್ಪಜ್ಞ ಹೆನ್ರಿ ಇರ್ವಿನ್ ಅವರು 1912ರಲ್ಲಿ ಅರಮನೆ ಸುಟ್ಟು ಹೋದ ಹಿನ್ನಲೆಯಲ್ಲಿ ಪುನಃನಿರ್ಮಾಣ ಮಾಡುತ್ತಾರೆ. ಆ ಕಾಲದಲ್ಲೇ ಇದರ ವೆಚ್ಚ ಸುಮರು 30 ಮಿಲಿಯನ್ ಡಾಲರ್ (ಅಂದರೆ ಸುಮಾರು200 ಕೋಟಿ ಡಾಲರ್). ಅರಮನೆ ಹಾಗೂ ದರ್ಬಾರ್ ಹಾಲ್ ನಿರ್ಮಾಣದ ಶೈಲಿಯೂ ಹಿಂದೂ ಮೊಗಲ್ ಹಾಗೂ ರಾಜಪೂತ್ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿದೆ.

ನವರಾತ್ರಿ ಹಬ್ಬದ ಪ್ರಾರಂಭ ರಾಜದರ್ಬಾರ್ ಹಾಲಿನಲ್ಲಿ ಸಲ್ಲಿಸುವ ಪೂಜೆಗಳ ಮೂಲಕ ಆಗುತ್ತದೆ. ಪ್ರಾಚೀನ ಕಾಲದಲ್ಲಿ ರಾಜ ಮಹರಾಜರು ನಡೆಸುತ್ತಾ ಬಂದ ಸಾಂಸ್ಕೃತಿಕ ಪೂಜೆಗಳು ಇಂದಿಗೂ ರಾಜಮನೆತನದವರು ಆಚರಿಸಿಕೊಂಡು ಬರುತ್ತಿದ್ದಾರೆ. ಮುಂಜಾನೆ 4.30ಕ್ಕೆ ಮಹಾರಾಜರಿಗೆ ಎಣ್ಣೆ ಸ್ನಾನ. ಆದಾದ ಬಳಿಕ ಬಹುಪರಾಕ್ ಘೋಷದೊಂದಿಗೆ ದರ್ಬಾರ್‌ನ್ನು ಪ್ರವೇಶಿಸುತ್ತಾರೆ. ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕಿ, 21 ಬಾರಿಯ ಗನ್ ಸೆಲ್ಯೂಟ್ ಹಾಗೂ ಪುಷ್ಪಾರ್ಪಣೆಯೊಂದಿಗೆ ಮಹಾರಾಜರು ಸಿಂಹಾಸನದ ಮೇಲೆ ಆಸೀನರಾಗುತ್ತಾರೆ. ಇದು ಬೆಳಗ್ಗೆ 11.45 ರಿಂದ 12.02 ಗಂಟೆಯ ಒಳಗೆ ಮಾಡಬೇಕು ಎಂಬುದು ಪ್ರಾಚೀನ ಕಾಲದ ಪದ್ಧತಿ ಹಾಗೂ ಅದು ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

ದರ್ಬಾರ್ ಹಾಲ್‍ಗೆ ಪ್ರವೇಶವು ರಾಜಮನೆತನಕ್ಕೆ ಹಾಗೂ ಕೆಲವು ಗಣ್ಯಾತಿಗಣ್ಯರಿಗೆ ಮಾತ್ರ ಸೀಮಿತವಾಗಿದ್ದು, ಅಂದಿನಿಂದ ಇಂದಿನವರೆಗೂ ಅಲ್ಲಿ ಮೆಲುದನಿಯಲ್ಲೇ ಮಾತನಾಡುವ ಪದ್ಧತಿ ಉಳಿದುಕೊಂಡು ಬಂದಿದೆ. 23 ದೇವಾಲಯದ ಪ್ರಧಾನ ಅರ್ಚಕರು ಇಲ್ಲಿ ಉಪಸ್ಥಿತರಿದ್ದು ಮಹಾರಾಜರಿಗೆ ಪ್ರಸಾದವನ್ನು ನೀಡುತ್ತಾರೆ. ಅಂದು ನಡೆಯುತ್ತಿದ್ದ ಪೂಜ ವಿಧಿಗಳು ಇಂದಿಗೂ ನಡೆಯುತ್ತಾ ಬಂದು ಅರಮನೆಯ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ. 21ನೇ ಶತಮಾನದ ಕವಿಗಳು ಈ ದರ್ಬಾರನ್ನು ಶ್ರೇಷ್ಠರ ಸಭೆ ಎಂದು ಕರೆದಿದ್ದಾರೆ.

ದರ್ಬಾರಿನ ಒಳಗೆ ನಡೆಯುವ ಈ ಎಲ್ಲಾ ವಿಧಿಗಳನ್ನು ಸಾಮಾನ್ಯ ಜನರಿಗೆ ನೋಡುವುದು ಅಸಾಧ್ಯ. ಆದರೆ ಈ ಬಾರಿ ಜನಸಾಮಾನ್ಯರಿಗೂ ಇದನ್ನು ಪರೋಕ್ಷವಾಗಿ ನೋಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ದರ್ಬಾರಿನ ಹಾಗೂ ಅಲ್ಲಿ ನಡೆಯುವ ವಿಧಿ-ವಿಧಾನಗಳ ಪ್ರತಿರೂಪವನ್ನು ಕಲಾಕೃತಿಗಳನ್ನು ಬನ್ನಿಮಂಟಪಲ್ಲಿರುವ ಎಲ್ ಐ ಸಿ ವೃತ್ತದಲ್ಲಿ ರಚಿಸಲಾಗಿದೆ. ಕಲೆಗೆ ಕಡಿವಾಣವಿಲ್ಲ ಎಂಬುದು ಮತ್ತೆ ಸಾಬೀತು ಮಾಡಿದಂತಿದೆ.