ನರಭಕ್ಷಕ ಹುಲಿ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ

ನರಭಕ್ಷಕ ಹುಲಿ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ

LK   ¦    Oct 09, 2019 06:01:47 PM (IST)
ನರಭಕ್ಷಕ ಹುಲಿ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ

ಚಾಮರಾಜನಗರ: ಇಬ್ಬರು ರೈತರನ್ನು ಬಲಿಪಡೆದ ನರಭಕ್ಷಕ ಹುಲಿಗಾಗಿ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಯ ಹುಟ್ಟಿಸಿರುವ ಹುಲಿ ಕಾರ್ಯಾಚರಣೆ ವೇಳೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದು, ಜನರ ಕಣ್ಣಿಗೆ ಕಾಣಿಸಿಕೊಂಡು ಭಯ ಭೀತರನ್ನಾಗಿಸಿದೆ. ಇದರ ಅರಿವಿಲ್ಲದೆ ತಮ್ಮ ಕಾಯಕಕ್ಕೆ ತೆರಳಿದ ರೈತರನ್ನು ಬಲಿ ಪಡೆದುಕೊಳ್ಳುತ್ತಿದೆ. 43 ದಿನಗಳ ಅಂತರದಲ್ಲಿ ಇಬ್ಬರನ್ನು ಈ ಹುಲಿ ಬಲಿ ಪಡೆದಿದೆ.

ಇದೀಗ ಈ ನರಭಕ್ಷಕ ಹುಲಿಯ ಪತ್ತೆಗಾಗಿ ಬಂಡೀಪುರ ಅರಣ್ಯ ಇಲಾಖೆಯು ಕಾರ್ಯತಂತ್ರ ಆರಂಭಿಸಲಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ, ಚೌಡಹಳ್ಳಿ ಹಾಗೂ ಕುಂದುಕೆರೆ ವ್ಯಾಪ್ತಿಯ ಕೆಬ್ಬೇಪುರ, ಮಕ್ಕಳ ಮಲ್ಲಪ್ಪ ದೇವಸ್ಥಾನ ಹಾಗೂ ಹುಂಡೀಪುರಗಳಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ.

ಈಗಾಗಲೇ ಹುಂಡೀಪುರ ಅರಣ್ಯ ವಲಯದಲ್ಲಿ ಬಿಡಾರಗಳನ್ನು ಹಾಕಿದ್ದು, ವೈಲ್ಡ್ ಲೈಫ್ ನ ಡಾ.ಪ್ರಯಾಗ್, ಡಾ.ವಸೀಂ, ಡಾ.ಅಜ್ಗರ್, ಡಾ.ಮುಜೀಬ್, ಡಾ.ಶಫಾತ್ ಅಲೀಖಾನ್, ಡಾ.ವಿನಯ್ ಸೇರಿದಂತೆ ಎಸಿಎಫ್ ರವಿಕುಮಾರ್, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಹುಲಿಯುನ್ನು ಸೆರೆ ಹಿಡಿಯುವ ಸಲುವಾಗಿ ಐದು ತಂಡಗಳನ್ನು ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ನಡುವೆ ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಕುರಿತಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸಂಜಯ್ ಮೋಹನ್ ಮಾತನಾಡಿ, ಬಂಡಿಪುರ ವ್ಯಾಪ್ತಿಯಲ್ಲಿ 120 ಹುಲಿಗಳಿವೆ. ಒಂದೆರಡು ಹುಲಿಗಳ ಸಮಸ್ಯೆಯಿದೆ. ಕಳೆದ ಬಾರಿ 60 ವರ್ಷದ ವೃದ್ಧನ ಮೇಲೆ ಹುಲಿ ದಾಳಿ ನಡೆಸಿತ್ತು. ಅದೇ ಹುಲಿನೇ ಇರಬಹುದು ಎನ್ನುವ ಸಂಶಯವಿದ್ದು, ಮೊದಲಿಗೆ ಯಾವ ಹುಲಿ ಎನ್ನುವುದನ್ನು ದೃಢಪಡಿಸಿಕೊಂಡು ಬಳಿಕ ಅದನ್ನು ಸೆರೆಹಿಡಿಯುಲಾಗುತ್ತದೆ ಎಂದು ಹೇಳಿದ್ದಾರೆ.

ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ಯಾವುದೇ ಆದೇಶ ಮಾಡಿಲ್ಲ. ಮಾಡುವುದೂ ಇಲ್ಲ. ಜೀವಂತವಾಗಿ ಸೆರೆ ಹಿಡಿಯಲಾಗುತ್ತದೆ. ಪ್ರತಿ ವರ್ಷ ಎರಡೆರಡು ಬಾರಿ ಕ್ಯಾಮೆರಾ ಇಡಲಾಗುತ್ತದೆ. ಕ್ಯಾಮೆರಾ ಮೂಲಕ ಪ್ರತಿಯೊಂದು ಹುಲಿಯ ವಿವರ ತಿಳಿಯಲಾಗುತ್ತದೆ. ಆ ಪ್ರದೇಶದಲ್ಲಿ ಓಡಾಡುವ ಹುಲಿ ಯಾವುದು ಎನ್ನುವ ವಿವರ ತಿಳಿದ ಬಳಿಕ ಯಾವ ಹುಲಿ ದಾಳಿ ಮಾಡಿರಬಹುದು ಎನ್ನುವುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.