ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್-೧೯ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್-೧೯ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭ: ಸಚಿವ ಸಿ.ಟಿ.ರವಿ

CI   ¦    Aug 01, 2020 04:08:51 PM (IST)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್-೧೯ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇನ್ನು ಮುಂದೆ ಕೋವಿಡ್-೧೯ ಟೆಸ್ಟಿಂಗ್ ಫಲಿತಾಂಶದಲ್ಲಿ ವಿಳಂಭವಾಗುವುದಿಲ್ಲ ಹಾಗೂ ಸ್ವ್ಯಾಬ್ ತೆಗೆದ ೪ ಗಂಟೆ ಒಳಗಾಗಿ ಫಲಿತಾಂಶ ದೊರೆಯುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಹೇಳಿದರು. 

  ಅವರು ಇಂದು ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಆರ್.ಟಿ.ಪಿ.ಸಿ.ಆರ್ ವೈರಾಲಜಿ (ಕೋವಿಡ್-೧೯) ಲ್ಯಾಬ್ ಉದ್ಘಾಟಿಸಿ ಮಾತನಾಡಿದರು. 

  ಜಿಲ್ಲೆಯಲ್ಲಿ ೧.೪೮.೬೨.೦೦೦ (ಒಂದು ಕೋಟಿ ೪೮ ಲಕ್ಷದ ೬೨ ಸಾವಿರ) ವೆಚ್ಚದಲ್ಲಿ ಹೊಸದಾಗಿ ಕೋವಿಡ್-೧೯ ಲ್ಯಾಬ್ ಸ್ಥಾಪನೆಯಾಗಿದ್ದು ಇದರ ಕಾರ್ಯಾರಂಭ ಮಾಡಲಾಗಿದೆ. ಇನ್ನು ಮುಂದೆ  ಜಿಲ್ಲೆಯಲ್ಲಿ ಕೋವಿಡ್-೧೯ ಫಲಿತಾಂಶದಲ್ಲಿ ವಿಳಂಭವಾಗದೆ ಸಮಯಕ್ಕೆ ಸರಿಯಾಗಿ ಫಲಿತಾಂಶ ದೊರೆಯಲಿದೆ ಜೊತೆಗೆ ಹಾಸನ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ಟೆಸ್ಟಿಂಗ್‌ಗೆ ಕಳುಹಿಸುವ ಅವಶ್ಯಕತೆಯಿಲ್ಲ  ಎಂದರು. 

  ಲ್ಯಾಬ್‌ಗೆ ಚಾಲ್ತಿಯಲ್ಲಿ ಹೆಚ್ಚಾಗಿ ಅನುಕೂಲಕರವಾಗಿರುವ ಹಾಗೂ ಐದು ವರ್ಷಗಳ ಕಾಲ ಗ್ಯಾರೆಂಟಿ ಇರುವ ಅತ್ಯುತ್ತಮವಾದ ಉಪಕರಣಗಳನ್ನು ಇಂಗ್ಲೆಂಡ್ ದೇಶದಿಂದ ಆಮದು ಮಾಡಿಕೊಳ್ಳವಾಗಿದೆ ಎಂದ ಅವರು ಲ್ಯಾಬ್ ಅನ್ನು ಜುಲೈ ೧೫ ರೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇತ್ತು ಲಾಕ್‌ಡೌನ್‌ನಿಂದಾಗಿ ಇಂಗ್ಲೆಂಡ್ ದೇಶದಿಂದ ತಡವಾಗಿ ಲ್ಯಾಬ್ ಉಪಕರಣಗಳು ಆಮದಾಗಿರುವ ಕಾರಣದಿಂದ ತಡವಾಗಿ ಲ್ಯಾಬ್‌ಗೆ ಚಾಲನೆ ನೀಡಲಾಗಿದೆ ಎಂದರು. 

ಈಗಾಗಲೇ ಲ್ಯಾಬ್‌ಗೆ ಸೂಕ್ತವಾಗಿರುವ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು ಎರಡು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿದೆ ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಿದಲ್ಲಿ ಮೂರು ಶಿಫ್ಟ್‌ಗಳಳಲ್ಲಿ ಲ್ಯಾಬ್ ಕಾರ್ಯನಿರ್ವಹಿಸಿ ದಿನಕ್ಕೆ ಸಾವಿರದಿಂದ ೧೨೦೦ ರವರೆಗೆ ಫಲಿತಾಂಶ ನೀಡಬಹುದಾಗಿದೆ ಎಂದು ತಿಳಿಸಿದರು.

  ಜಿಲ್ಲೆಗೆ ಈ ಹಿಂದೆ ೧೫ ದಿನಗಳ ಕಾಲ ಕೋವಿಡ್-೧೯ ಫಲಿತಾಂಶಗಳು ವಿಳಂಬವಾಗಿರುವುದು ತಿಳಿದಿದೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ, ಸ್ವ್ಯಾಬ್ ಡ್ರಾ ಮಾಡಿದ ೪ ಗಂಟೆ ಒಳಗಾಗಿ ಫಲಿತಾಂಶ ದೊರೆಯುವುದು ಹೆಚ್ಚು ಎಂದರೆ ೧೨ ಗಂಟೆ ಒಳಗಾಗಿ ಫಲಿತಾಂಶ ನೀಡಲಾಗುವುದು ಎಂದರು.

  ಜಿಲ್ಲೆಯ ಕೋವಿಡ್ ಸೆಂಟರ್ ಆಸ್ಪತ್ರೆಗಳಲ್ಲಿ ಸೂಕ್ತ ಆಹಾರ ನೀಡುತ್ತಿಲ್ಲ ಎಂಬ ದೂರುಗಳಿ ಕೇಳಿಬಂದಿದ್ದು, ಆ ರೀತಿಯಲ್ಲಿ ಕೋವಿಡ್ ಸೆಂಟರ್‌ಗಳಲ್ಲಿ ಆಹಾರ ವ್ಯವಸ್ಥೆಯ ಲೋಪವಿಲ್ಲ, ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ ಹಾಗೂ ಅದೇ ಆಹಾರವನ್ನು ಇಲ್ಲಿನ ಸಿಬ್ಬಂದಿಗಳು ಸೇವಿಸುತ್ತಿದ್ದು ಸೂಕ್ತ ಆಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. 

  ಕೋವಿಡ್-೧೯ ನಿಂದ ಮೃತರ ಶವವನ್ನು ಕುಟುಂಬಸ್ಥರು ನಿರಾಕರಿಸಿದ್ದಲ್ಲಿ ಗೌರವಯುತವಾಗಿ ಶವಸಂಸ್ಕಾರ ಮಾಡಲು ಈಗಾಗಲೇ ತಂಡ ರಚಿಸಲಾಗಿದ್ದು, ಈ ರೀತಿಯ ಸಂದರ್ಭದಲ್ಲಿ ತಂಡವು ಸದಾ ಸಿದ್ಧವಾಗಿದೆ ಹಾಗೂ ಗೌರವಯುತವಾಗಿ ಶವಸಂಸ್ಕಾರ ಕಾರ್ಯ ಮಾಡಲಾಗುವುದು ಎಂದರು. 

  ಇದೇ ಸಂದರ್ಭದಲ್ಲಿ ವಿಧಾನಸಭಾ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಉಮೇಶ್, ಜಿಲ್ಲಾ ಸರ್ಜನ್ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.