ನಿಖಿಲ್ ಗೆಲುವಿನ ಮುನ್ಸೂಚನೆ ನೀಡಿದ ಬಸವ ವಿಡಿಯೋ ವೈರಲ್

ನಿಖಿಲ್ ಗೆಲುವಿನ ಮುನ್ಸೂಚನೆ ನೀಡಿದ ಬಸವ ವಿಡಿಯೋ ವೈರಲ್

LK   ¦    May 15, 2019 05:56:42 PM (IST)
ನಿಖಿಲ್ ಗೆಲುವಿನ ಮುನ್ಸೂಚನೆ ನೀಡಿದ ಬಸವ ವಿಡಿಯೋ ವೈರಲ್

ಭಾರತೀನಗರ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ವಿವಿಧ ಸಮೀಕ್ಷೆಗಳ ಜತೆಗೆ ದೇವರು ಹೂ ನೀಡಿ ಸುಮಲತಾ ಗೆಲ್ಲುತ್ತಾರೆ ಎಂದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಿಖಿಲ್ ಗೆಲ್ಲಲಿದ್ದಾರೆ ಎಂಬುದಕ್ಕೆ ಜೆಡಿಎಸ್ ಕಾರ್ಯಕರ್ತರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಸಮೀಪದ ಹೊನ್ನಾಯಕನಹಳ್ಳಿ ಮಠದ ಸುಪ್ರಸಿದ್ಧ ಬಸವಣ್ಣ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರ್‌ಸ್ವಾಮಿಗೆ ಚುನಾವಣಾ ಪ್ರಚಾರದ ವೇಳೆ ಪಾದ ನೀಡಿತ್ತು. ತಮ್ಮ ಇಷ್ಟಾರ್ಥ ನೆರವೇರುವುದಾದರೆ ಮಾತ್ರ ಬಸವಣ್ಣ ಪಾದ ನೀಡುತ್ತಾನೆ. ಹಾಗಾಗಿ ಚುನಾವಣೆ ಪ್ರಚಾರದ ವೇಳೆಯೇ ಬಸವಣ್ಣ ನಿಖಿಲ್‌ಗೆ ಆಶೀರ್ವಾದ ಮಾಡಿದ್ದಾನೆ.

ಹಾಗಾಗಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಅಭ್ಯರ್ಥಿ ಗೆಲುವು ಖಚಿತ ಎಂದು ಜೆಡಿಎಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಸವಣ್ಣನ ಭಕ್ತರು ನಿಖಿಲ್ ಪರವಾಗಿ ಹೆಚ್ಚು ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ. ಬಸವ ಪಾದ ಕೊಟ್ಟಿರುವ ವಿಡಿಯೋ ಗಮನಿಸಿದ ಸುಮಲತಾ ಕಡೆಯವರು ಬೆಟ್ಟಿಂಗ್ ಕಟ್ಟಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ, ಫಲಿತಾಂಶ ಕುರಿತು ದಿನೇ ದಿನೇ ಕುತೂಹಲ ಹೆಚ್ಚುತ್ತಿದ್ದು, ಸಿಎಂ ಕುಮಾರಸ್ವಾಮಿ ದೇವರ ಮೊರೆ ಹೋಗಿರುವಂತೆಯೇ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರು ತಮ್ಮ ಇಷ್ಟದ ದೈವಗಳ ಬಳಿ ಭವಿಷ್ಯ ಕೇಳಲು ಮುಗಿ ಬೀಳುತ್ತಿದ್ದಾರೆ.