ಹೋಂಸ್ಟೇ ಏಜೆಂಟ್ ದಂಧೆ ವಿರುದ್ಧ ಕ್ರಮ: ಎಸ್ಪಿ

ಹೋಂಸ್ಟೇ ಏಜೆಂಟ್ ದಂಧೆ ವಿರುದ್ಧ ಕ್ರಮ: ಎಸ್ಪಿ

Jul 19, 2017 09:44:06 PM (IST)

ಮಡಿಕೇರಿ: ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ದಬ್ಬಾಳಿಕೆ ನಡೆಸುವ ಹೋಂಸ್ಟೇ ಏಜೆಂಟ್ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹೋಂಸ್ಟೇ ವ್ಯವಸ್ಥೆಗಳು ಹಾದಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ವಾಹನಗಳನ್ನು ಅಡ್ಡಗಟ್ಟಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಸ್ವತಃ ತಮಗೆ ಈ ಅನುಭವವಾಗಿದ್ದು, ರಾತ್ರಿ 12 ಗಂಟೆ ಸುಮಾರಿಗೆ ನಗರದ ಕಾರ್ಯಪ್ಪ ವೃತ್ತದ ಬಳಿ ನಾನು ಹಾಗೂ ಸ್ನೇಹಿತ ಖಾಸಗಿ ಕಾರಿನಲ್ಲಿ ಬರುತ್ತಿರುವಾಗ ಹೋಂ ಸ್ಟೇ ಮಾಲೀಕರು ವಾಹನವನ್ನು ತಡೆದಿದ್ದಾರೆ. ಹೋಂಸ್ಟೇ ಬೇಕೆ ಎಂದು ವಿಚಾರಿಸಿ ಅಬ್ಬಿಫಾಲ್ಸ್ ಬಳಿಯಲ್ಲಿರುವ ಹೋಂ ಸ್ಟೇಗೆ ಆಹ್ವಾನಿಸಿದ್ದಾರೆ. ಮಧ್ಯರಾತ್ರಿಯಲ್ಲಿ ವಾಹನಕ್ಕೆ ಅಡ್ಡಹಾಕಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ತಾನು ಎಸ್ಪಿ ಎಂದು ತಿಳಿದಾಗ ಆತ ಅಲ್ಲಿಂದ ಕಾಲ್ಕಿತ್ತರು ಎಂದು ಹೇಳಿದರು. ವೆಬ್ಸೈಟ್ ಮೂಲಕ ನಡೆಯುತ್ತಿದ್ದ ಹೆಣ್ಣು ಮಕ್ಕಳ ದಂಧೆ ಮತ್ತು ಹನಿ ಟ್ರ್ಯಾಪ್ ಗಳಂತಹ ಪ್ರಕರಣಗಳಿಗೆ ಈಗಾಗಲೆ ಕಡಿವಾಣ ಹಾಕಲಾಗಿದೆ. ಇನ್ನು ಮುಂದೆ ಹೋಂಸ್ಟೇ ಏಜೆಂಟ್ ದಂಧೆ ವಿರುದ್ಧವೂ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ರಾಜಾಸೀಟ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವವರಿಂದಲೂ ದಂಧೆ ನಡೆಯುತ್ತಿದ್ದು, ಎಸ್ಪಿ ಬಂಗ್ಲೆ ಬಳಿ ನಿಲ್ಲಿಸಿದ ವಾಹನಗಳಿಂದಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ, ಎಲ್ಲೆಂದರಲ್ಲಿ ನಿಲ್ಲಿಸಿದ ಎಲ್ಲಾ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಮೂಲಕ ಮುಜುಗರವನ್ನು ಉಂಟು ದಬ್ಬಾಳಿಕೆ ನಡೆಸಲಾಗುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಎಸ್ಪಿ ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಹೋಂ ಸ್ಟೇ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಎಂ.ಕರುಂಬಯ್ಯ, ಹೋಂ ಸ್ಟೇ ಮಾಲೀಕರಿಂದ ಮಾತ್ರವಲ್ಲದೆ, ಪ್ರವಾಸಿಗರಿಂದಲೂ ಏಜೆಂಟರು ಕಮಿಷನ್ ವಸೂಲಿ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನೋಂದಣಿಯಾಗದ ಹೋಂಸ್ಟೇ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದರು.

ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗಾಂಜಾ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಕೊಡಗಿನಲ್ಲಿ ಎಲ್ಲೂ ಗಾಂಜಾ ಬೆಳೆಯಲಾಗುತ್ತಿಲ್ಲ. ಆದರೆ, ಮೈಸೂರು ಭಾಗದಿಂದ ಕೊಡಗಿಗೆ ಗಾಂಜಾ ಸರಬರಾಜಾಗುತ್ತಿದೆ. ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಈ ದಂಧೆ ಇನ್ನೂ ಜೀವಂತವಾಗಿದ್ದು, ಕೊಡಗು ಪೊಲೀಸರಿಗೆ ಸವಾಲಾಗಿದೆ ಎಂದು ಎಸ್ಪಿ ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಹಣದ ಕೊರತೆ ಇಲ್ಲವೆಂದು ತಿಳಿಸಿದ ಎಸ್ಪಿ ರಾಜೇಂದ್ರ ಪ್ರಸಾದ್, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಅಪರಾಧ ಪ್ರಕರಣಗಳನ್ನು ತಡೆಯಲು ಜಿಲ್ಲೆಯಾದ್ಯಂತ ಸುಮಾರು 400 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದರು. ಈಗಾಗಲೆ ಮಡಿಕೆೇರಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣ, ಗಡಿಭಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಡಳಿತದ ಅನುದಾನದಿಂದ ಇನ್ನೂ ಹೆಚ್ಚಿನ ಕ್ಯಾಮೆರಾಗಳನ್ನು ಖರೀದಿಸಿ ಅಳವಡಿಸಲಾಗುವುದೆಂದು ತಿಳಿಸಿದರು. ಕೊಡಗಿನ ಪೊಲೀಸ್ ಇಲಾಖೆಯ ಇತಿಹಾಸದಲ್ಲೆ ದಾಖಲೆಯ 800 ಬ್ಯಾರಿಕೇಡ್ಗಳನ್ನು ಖರೀದಿಸಲಾಗಿದೆ ಎಂದು ಇದೇ ಸಂದರ್ಭ ಮಾಹಿತಿ ನೀಡಿದರು.