ಕಾಸರಗೋಡು ಜಿಲ್ಲೆಗೆ 36ರ ಹರೆಯ

ಕಾಸರಗೋಡು ಜಿಲ್ಲೆಗೆ 36ರ ಹರೆಯ

SK   ¦    May 23, 2020 09:12:50 PM (IST)
ಕಾಸರಗೋಡು ಜಿಲ್ಲೆಗೆ 36ರ ಹರೆಯ

ಕಾಸರಗೋಡು: ಕಾಸರಗೋಡು ಜಿಲ್ಲೆ ರಚನೆಗೊಂಡು ನಾಳೆಗೆ (ಮೇ 24) 36 ವರ್ಷ  ಪೂರ್ಣಗೊಂಡಿದೆ.  1984 ಮೇ 24ರಂದು ಜಿಲ್ಲೆ ರೂಪುಗೊಂಡಿತ್ತು. ಅನೇಕ ಸಾಧನೆಗಳು ಈ ನಿಟ್ಟಿನಲ್ಲಿ ನಾಡಿಗೆ ಹಿರಿಮೆ ತಂದಿವೆ. ಜೊತೆಗೆ ಅನೇಕ ನಿರೀಕ್ಷೆಗಳನ್ನೂ ಈ ಹುಟ್ಟುಹಬ್ಬ ಹೊತ್ತು ತಂದಿದೆ. ಆರೋಗ್ಯ ವಲಯದಲ್ಲಿ ಜಗತ್ತಿಗೇ ಮಾದರಿಯಾಗಿರುವ ಜಿಲ್ಲೆಯಲ್ಲಿ ಶಿಕ್ಷಣ, ಆರ್ಥಿಕ ವಲಯಗಳಲ್ಲೂ ಗಮನಾರ್ಹ ಏಳಿಗೆ  ಕಂಡಿವೆ.

ಶಿಕ್ಷಣ ಸಾಧನೆಗಳು ಬಹುಭಾಷಾ ಸಂಗಮಭೂಮಿ ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ವಲಯದ ಸಾಧನೆಗಳು ಗಮನ ಸೆಳೆಯುತ್ತವೆ. ಸ್ಮಾರ್ಟ್ ತರಗತಿಗಳ ಸಹಿತ ಅತ್ಯಉನಿಕ ಸೌಲಭ್ಯಗಳನ್ನು ಹೊಂದಿರುವ ಸರಕಾರಿ ಶಾಲೆಗಳು ಇಂದು ನಾಡಿನಲ್ಲಿವೆ. ಕನ್ನಡ, ಮಲಯಾಳಂ, ಇಂಗ್ಲೀಷ್ ಮಾಧ್ಯಮ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ಶಾಲೆಗಳು, ಕೇಂದ್ರೀಯ ವಿವಿ, ಆಯುರ್ವೇದ ಮೆಡಿಕಲ್ ಕಾಲೇಜು, ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಸಹಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಜಿಲ್ಲೆಯ ಎಲ್ಲ ವಲಯಗಳಲ್ಲೂ ಪ್ರೌಢಶಾಲೆಗಳಿವೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಾರಿಗೆ ಬಂದ ಮೇಲೆ ದೊಡ್ಡ ಕ್ರಾಂತಿ ನಡೆದಿವೆ. 2019 ರಲ್ಲಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಇಡೀ ರಾಜ್ಯದ ಮಹೋತ್ಸವವಾಗಿತ್ತು.   

ಜಲ ಸಮೃದ್ಧಿ

ಕುಡಿಯುವ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತ್ವರಿತ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆದಿವೆ. ಜೊತೆಗೆ ಜಿಲ್ಲೆಯಲ್ಲಿ ಭೂಗರ್ಭ ಜಲ ಸಂರಕ್ಷಣೆಗೂ ವಿವಿಧ ಯೋಜನೆಗಳು ಜಾರಿಗೆ ಬಮದಿವೆ. ರಾಜ್ಯ ಸರಕಾರದ ಹರಿತ ಕೇರಳಂ ಯೋಜನೆಯ ಅಂಗವಾಗಿ ನದಿಗಳ ಸಹಿತ ಜಲಾಶಯಗಳ ಪುನಶ್ಚೇತನ ನಡೆಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯಿಂದ ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿರುವ ಬ್ಯಾಂಬೂ ಕ್ಯಾಪಿಟಲ್ ಯೋಜನೆ ದೇಶಕ್ಕೇ ಮಾದರಿಯಾದುದು. ರಾಷ್ಟ್ರೀಯ ನೌಕರಿ ಖಾತರಿ ಯೋಜನೆಯನ್ನು ಬಳಸಿ ಮಳೆ ನೀರು ಇಂಗು ಗುಂಡಿ, ಮಳೆ ನೀರ ಸಂರಕ್ಷಣೆ, ಬಾವಿಗಳ ಸಹಿತ ಜಲಾಶಯಗಳ ರೀಚಾರ್ಜ್ ಇತ್ಯಾದಿಗಳು ನೀಡಿದ ಯೋಗದಾನ ಸಣ್ಣದಲ್ಲ. 

ಆರೋಗ್ಯ ವಲಯ

ಕೋವಿಡ್ ಪ್ರತಿರೋಧ ಚಟುವಟಿಕೆಗಳು ಸಹಿತ ಆರೋಗ್ಯ ವಲಯದಲ್ಲಿ ಕಾಸರಗೋಡು ಜಿಲ್ಲೆ ನಡೆಸಿದ ಸಾಧನೆ ಜಗತ್ತಿಗೇ ಮಾದರಿಯಾಗಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಉದ್ಘಾಟನೆ ನಡೆಸಲೂ ಕಾಯದೆ ಕೋವಿಡ್ ಚಿಕಿತ್ಸಾಲಯವಾಗಿ ಮಾರ್ಪಡಿಸಿ, ಪರಿಣಾಮಕಾರಿ ಫಲಿತಾಂಶ ಒದಗಿಸಿದ್ದು ಜಿಲ್ಲೆ 36 ವರ್ಷ ಪೂರ್ಣಗೊಳಿಸಿರುವ ವೇಳೆ ಶ್ಲಾಘನೀಯ ವಿಚಾರವಾಗಿದೆ. ಜಿಲ್ಲೆಯ 53 ಆರೋಗ್ಯ ಸಂಸ್ಥೆಗಳು ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ದೊಡ್ಡ ಸಾಧನೆ ನಡೆಸುತ್ತಿವೆ. ಇದರ ಪರಿಣಾಮ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿ ಪಡೆದಿವೆ. ಕಾಞಂಗಾಡ್ ತಾಲೂಕು ಆಸ್ಪತ್ರೆ 1985ರಲ್ಲಿ ಆರಂಭಗೊಂಡಿದ್ದು, ಹಂತಹಂತವಾಗಿ ಅನೇಕ ಜನಪರ ಸಾಧನೆ ನಡೆಸಿದ್ದು, 2019ರ ವೇಳೆ ರಾಷ್ಟ್ರೀಯ ಮಟ್ಟದ ಕಾಯಕಲ್ಪ ಅಂಗೀಕಾರಕ್ಕೆ ಪಾತ್ರವಾಗಿದೆ. ಕಾಸರಗೋಡು ತಾಲೂಕು ಆಸ್ಪತ್ರೆ ಜನರಲ್ಆಸ್ಪತ್ರೆಯಾಗಿ ಬಡ್ತಿ ಪಡೆದಿದೆ. ಡಯಾಲಿಸಿಸ್ ಸಹಿತ ಸೌಲಭ್ಯಗಳು ಇಂದು ಜಿಲ್ಲೆಯ ಸರಕಾರಿ ತಾಲೂಕು ಆಸ್ಪತ್ರೆಗಳಲ್ಲಿವೆ. ಟಾಟಾ ಸಮೂಹ ಸಂಸ್ಥೆಯ ಮಲ್ಟಿ ಸ್ಪಷ್ಯಾಲಿಟಿ ಆಸ್ಪತ್ರೆ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಎಂಡೋ ಸಂತ್ರಸ್ತರ ಸಾಂತ್ವನಕ್ಕೆ ರಾಜ್ಯ ಸರಕಾರ ವೆಚ್ಚ ಮಾಡಿದ್ದು 283 ಕೋಟಿ ರೂ. ಎಂಡೋಸಲ್ಫಾನ್ ಸಂತ್ರಸ್ತರ ಸಾಂತ್ವನಕ್ಕಾಗಿ ರಾಜ್ಯ ಸರಕಾರ 283 ಕೋಟಿ ರೂ. ವೆಚ್ಚ ಮಾಡಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಹಾಯವಾಗಿ 171.10 ಕೋಟಿ ರೂ., ಚಿಕಿತ್ಸೆಗಾಗಿ 15.03 ಕೊಟಿ ರೂ., 2019-20 ನವೆಂಬರ್ ವರೆಗಿನ ಪಿಂಚಣಿ, ಆಶ್ವಾಸ ಕಿರಣ ಯೋಜನೆ, ವಿದ್ಯಾರ್ಥಿ ವೇತನ ಇತ್ಯಾದಿಗಳಿಗೆ 88.39 ಕೋಟಿ ರೂ., ಸಾಲ ಮನ್ನಾಕ್ಕಾಗಿ 6.82 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ರಾಜ್ಯ ಬಜೆಟ್ ನಲ್ಲಿ 50 ಕೊಟಿ ರೂ. ಮಂಜೂರು ಮಾಡಲಾಗಿತ್ತು. ಈ ತಿಂಗಳಲ್ಲಿ ಮಾತ್ರ ಜಿಲ್ಲಾಧಿಕಾರಿ ಅವರ ನಿಧಿಯಿಂದ ಸಂತ್ರಸ್ತರ ಚಿಕಿತ್ಸೆ ಮತ್ತು ಔಷಧಕ್ಕಾಗಿ 2 ಕೊಟಿ ರೂ. ಒದಗಿಸಲಾಗಿತ್ತು.

ಈಗ 6728 ಮಂದಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 371 ಮಂದಿ ಹಾಸುಗೆ ಹಿಡಿದವರು, 1499 ಮಂದಿ ಬುದ್ಧಿ ಮಾಂದ್ಯತೆ ಇರುವವರು, 1189 ಮಂದಿ ವಿಶೇಷ ಚೇತನರು, 699 ಕ್ಯಾನ್ಸರ್ ಬಾಧಿತರು, ಇತರರು 2970 ಮಂದಿ ಪಟ್ಟಿಯಲ್ಲಿದ್ದಾರೆ.

ಹೀಗೆ ಹೇಳುತ್ತಾ ಸಾಗಿದರೆ ಈ ಪಟ್ಟಿ ಮುಂದುವರಿಯುತ್ತಿದೆ. ಜಿಲ್ಲೆ ರಚನೆಗೆ 36 ವರ್ಷ ಪೂರ್ಣಗೊಳ್ಳುವ ವೇಳೆ ಇನ್ನೂ ಅನೇಕ ನಿರೀಕ್ಷೆಗಳು ನಮ್ಮ ಮುಂದಿವೆ.