ಹದಗೆಟ್ಟ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಹದಗೆಟ್ಟ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

SK   ¦    Nov 08, 2019 05:44:02 PM (IST)
ಹದಗೆಟ್ಟ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಕಾಸರಗೋಡು: ಕಾಸರಗೋಡು-ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಯನ್ನು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ವಿಭಿನ್ನ ಹೋರಾಟಕ್ಕೆ ಮುಂದಾಗಿದೆ. ಶುಕ್ರವಾರ  ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲುಗಡೆಗೊಳಿಸಿ ಪ್ರತಿಭಟನೆ ನಡೆಸಿದೆ. 

ತಿಂಗಳುಗಳಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ತಲಪಿದ್ದರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲೂ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕ್ರಿಯಾ ಸಮಿತಿ ಮುನ್ನೆಚ್ಚರಿಕೆ ನೀಡಿದೆ.

ಶೋಚನೀಯವಾದ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರ ಯೋಗ್ಯಗೊಳಿಸಬೇಕು ಎಂದು ಆಗ್ರಹಿಸಿ ತಿಂಗಳು ಕಾಲ ನಡೆದ ಪ್ರತಿಭಟನೆಗೆ ಮಣಿದು ದುರಸ್ತಿ ನಡೆಸಿದ್ದರೂ ಈಗ ಮತ್ತೆ ಹೆದ್ದಾರಿ ಪೂರ್ವ ಸ್ಥಿತಿಗೆ ತಲುಪಿದೆ.

ಮೊಗ್ರಾಲ್‌ಪುತ್ತೂರಿನಿಂದ ಕುಂಬಳೆಯವರೆಗೆ ರಸ್ತೆ ಸಂಪೂರ್ಣವಾಗಿ ಹಾನಿ ಗೀಡಾಗಿದೆ. ಕೆಲವೆಡೆ ವಾಹನಗಳಿಗೆ ಹಾದುಹೋಗಲು ಸಾಧ್ಯವಾಗದಷ್ಟು ಬೃಹತ್‌ ಹೊಂಡಗಳು ಸೃಷ್ಟಿಯಾಗಿವೆ.

ರಸ್ತೆಯ ಹೀನಾಯ ಸ್ಥಿತಿಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಕೂಡ ಮುಂದಿಟ್ಟುಕೊಂಡು ಕ್ರಿಯಾ ಸಮಿತಿ ಹೋರಾಟಕ್ಕಿಳಿಯುತ್ತಿದೆ. ಲೋಕೋಪಯೋಗಿ ಎಂಜಿನಿಯರ್‌ರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು  ಎಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದೆ.

ಕ್ರಿಯಾ ಸಮಿತಿಯ ಇಕ್ಬಾಲ್ ಉಪ್ಪಳ ,ಅಬ್ದುಲ್‌ ಲತೀಫ್‌ ಕುಂಬಳೆ, ಮುಹಮ್ಮದ್‌ ಸ್ಮಾರ್ಟ್‌, ಮುಹಮ್ಮದ್‌ ಮೊಗ್ರಾಲ್‌, ಅನ್ಸಾರ್‌ ಆರಿಕ್ಕಾಡಿ, ಮೊಯ್ದು ಕಡವತ್‌, ಅಶ್ರಫ್‌ ಬದ್ರಿಯ ನಗರ್‌, ತ್ವಯ್ಯಿಬ್‌ ಆರಿಕ್ಕಾಡಿ, ಹರ್ಷಾದ್‌, ಹಸನ್‌ ಕುಂಞಿ, ಅಬ್ದುಲ್ಲ, ಲತೀಫ್‌, ಆಸಿಫ್‌, ಅಫ್ಸಲ್‌ ಮೊದಲಾದವರು ನೇತೃತ್ವ ನೀಡಿದರು.