ನ.24ರಂದು 29ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶ

ನ.24ರಂದು 29ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶ

CI   ¦    Nov 08, 2019 07:25:20 PM (IST)
ನ.24ರಂದು 29ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶ

ಮಡಿಕೇರಿ: ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿಯ ಹಕ್ಕೊತ್ತಾಯವನ್ನು ಮುಂದಿಟ್ಟು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ 29ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶವನ್ನು ನ.24ರಂದು ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಮಾತ್ರ ತಮ್ಮ ಸಾಂಸ್ಕೃತಿಕ, ತಾಯಿ ಬೇರು ಹೊಂದಿರುವ, ಕೊಡಗಿಗೆ ಮಾತ್ರ ಸೀಮಿತವಾಗಿರುವ ಕೊಡವ ಬುಡಕಟ್ಟು ಕುಲದ ಭಾಷೆ ಸಂಸ್ಕೃತಿ, ಪರಂಪರೆ ಜನಪದ, ಸಾಂಪ್ರದಾಯಿಕ ಆವಾಸ ಸ್ಥಾನ, ಆಲೋಚನೆ, ವಿಚಾರಧಾರೆ, ಭಾವನೆ ಮತ್ತು ಅಶೋತ್ತರಗಳು ವಿಶಿಷ್ಟ ಮತ್ತು ಅಪೂರ್ವವಾಗಿದೆ. ಆದರೆ ಇಂದು ನಮ್ಮ ಜನಸಂಖ್ಯೆ ಕ್ಷೀಣಿಸುವ ಮೂಲಕ ಇವೆಲ್ಲವೂ ದುರ್ಬಲವಾಗುತ್ತಿದೆ ಎಂದು ವಿಷಾದಿಸಿದರು.

ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಸ್ವಯಂ ನಿರ್ಣಯ ಹಕ್ಕು ರಕ್ಷಣೆಗೆ ಕೊಡಮಾಡಿರುವ ಮಾನವ ಹಕ್ಕು ಕಾಯ್ದೆ ಪ್ರಕಾರ ಕೊಡವರ ಭೂ-ರಾಜಕೀಯ ಸ್ವಯಂ ಶಾಸನದ ಜನ್ಮಭೂಮಿ ಕೊಡವ ಲ್ಯಾಂಡ್ ರಚನೆ ಮತ್ತು ಕೊಡವ ಬುಡಕಟ್ಟು ಕುಲದ ಸಮಸ್ಥ ಏಳಿಗೆ, ವಿಕಾಸ ಮತ್ತು ಕಲ್ಯಾಣಕ್ಕಾಗಿ ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗದ 340 ಮತ್ತು 342ನೇ ವಿಧಿ ಪ್ರಕಾರ ಬುಡಕಟ್ಟು ಕುಲವೆಂದು ಎಸ್.ಟಿ ಪಟ್ಟಿಯಲ್ಲಿ ಮಾನ್ಯ ಮಾಡಬೇಕೆಂಬ ಹಕ್ಕೊತ್ತಾಯ ಮುಂದಿರಿಸುವದರೊಂದಿಗೆ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ  ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ವಿಶ್ವ ಸಂಸ್ಥೆಯ ಯುನೇಸ್ಕೋದ ಇಂಟಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಪ್ರಧಾನ ಹಕ್ಕೊತ್ತಾಯಗಳನ್ನು ಕೊಡವ ನ್ಯಾಷನಲ್ ಡೇಯಲ್ಲಿ ಮಂಡಿಸಲಾಗುವುದು ಎಂದರು.

ಟಿಪ್ಪುವಿನ ಸೇನೆಯೊಂದಿಗೆ ಸೇರಿ ದೇವಾಟ್‍ಪರಂಬುವಿನಲ್ಲಿ ಕೊಡವರ ಮಾರಣಹೋಮ ನಡೆಸಿದ ಕೃತ್ಯಕ್ಕಾಗಿ ಫ್ರೆಂಚ್ ಸರಕಾರ ಕೊಡವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುವ ಸಲುವಾಗಿ ದೆಹಲಿಯ ಫ್ರೆಂಚ್ ರಾಯಭಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾದ ಸತ್ಯಾಗ್ರಹ ‘ಕೊಡವರ ಕುಲಕ್ಷಯದ’ ಬಗ್ಗೆ ಜಗತ್ತಿನ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುವಲ್ಲಿ   ಯಶಸ್ವಿಯಾಗಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಅಲ್ಲದೆ ಸಂಘಟನೆಯ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನವದೆಹಲಿಯ ಜಂತರ್‍ಮಂತರ್‍ನಲ್ಲಿ ನಡೆಸಿದ ಸತ್ಯಾಗ್ರಹವೂ ಈ ದೇಶದ ಸರ್ವೋಚ್ಛ ಅಧಿಕಾರ ಸ್ತಂಭಕ್ಕೆ ಮತ್ತು ರಾಷ್ಟ್ರ, ಅಂತರರಾಷ್ಟ್ರೀಯ ರಂಗದ ಎದುರು ಅನಾವರಣಗೊಂಡಿದೆ ಎಂದರು.

 ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಚಂಬಂಡ ಜನತ್, ಅರೆಯಡ ಗಿರೀಶ್ ಹಾಗೂ ಪುದಿಯೊಕ್ಕಂಡ ಕಾಶಿ ಉಪಸ್ಥಿತರಿದ್ದರು.