ರೈತರ ಭತ್ತದ ಬೆಳೆ ನಾಶಪಡಿಸಿದ ಕಾಡಾನೆಗಳು

ರೈತರ ಭತ್ತದ ಬೆಳೆ ನಾಶಪಡಿಸಿದ ಕಾಡಾನೆಗಳು

LK   ¦    Oct 17, 2020 05:22:23 PM (IST)
ರೈತರ ಭತ್ತದ ಬೆಳೆ ನಾಶಪಡಿಸಿದ ಕಾಡಾನೆಗಳು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ರೈತರು ಬೆಳೆದ ಬೆಳೆಯನ್ನು ತಿಂದು, ತುಳಿದು ನಾಶಪಡಿಸುತ್ತಿವೆ.

ಭತ್ತ ಹಾಗೂ ಮುಸುಕಿನ ಜೋಳ ಬೆ¼ದ ಜಮೀನಿಗೆ ಲಗ್ಗೆಯಿಟ್ಟ ಕಾರಣ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಾಶವಾಗಿವೆ. ಹನಗೋಡು ಹೋಬಳಿಯ ಕಾಳಬೋಚನಹಳ್ಳಿ ಗ್ರಾಮದ ಕೆ.ಎ.ಗೋಪಲಗೌಡ ಮತ್ತು ಅವಿನಾಶ್‍ರಿಗೆ ಸೇರಿದ ಭತ್ತದ ಬೆಳೆ ಹಾಗೂ ಇದೇ ಗ್ರಾಮದ ಬೋರೆಗೌಡ ಸೇರಿದ ರಾಗಿಬೆಳೆಯನ್ನು ಕೃಷ್ಣಪ್ಪನಕಟ್ಟೆ  ಅರಣ್ಯ ಭಾಗದಿಂದ ಬಂದ ಕಾಡಾನೆಗಳು  ತಿಂದು, ತುಳಿದು ನಾಶಪಡಿಸಿವೆ. 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ವನ್ಯಜೀವಿ ಅರಣ್ಯ ಇಲಾಖೆ ಡಿ ಆರ್ ಎಫ್ ಒ ಸಿದ್ದರಾಜ್ ಹಾಗೂ ಸಿಬ್ಬಂದಿ ಬೆಳೆ ನಾಶವಾಗಿರುವ ಬಗ್ಗೆ ಮಹಜರ್ ನಡೆಸಿದ್ದಾರೆ. ಈ ವೇಳೆ ಬೆಳೆನಾಶದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಕೂಡಲೇ ಸೂಕ್ತ ಪರಿಹಾರವನ್ನು ಶೀಘ್ರದಲ್ಲೇ ನೀಡಬೇಕು ಹಾಗೂ ಕಾಡಾನೆ ಹೊರ ಬಾರದಂತೆ ನೋಡಿಕೊಳ್ಳಲು ರಾತ್ರಿ ಕಾವಲು ಪಡೆಯನ್ನು ನೇಮಿಸಬೇಕೆಂದು ಕಾಳಬೋಚನಹಳ್ಳಿ ರೈತ ಮುಖಂಡ ಕೆ.ಪಿ.ದಿನೇಶ್‍ಕುಮಾರ್ ಸೇರಿದಂತೆ ಹಲವು ರೈತರು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನಡೆಸಿರುವ ಅರಣ್ಯಾಧಿಕಾರಿಗಳು ಕಳೆದೆರಡು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳು ಕಾಡಿನಿಂದ ಹೊರಬಂದಿರಲಿಲ್ಲ. ಕೂಡಲೇ ತಾತ್ಕಾಲಿಕವಾಗಿ ರಾತ್ರಿ ವೇಳೆ ಕಾಡಾನೆ ಕಾವಲು ಕಾಯಲು ಪಕ್ಕದ ಜಮೀನಿನ ರೈತರಿಗೆ ತಿಳಿಸಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.