ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಹೋರಾಟ: ವೀಣಾಅಚ್ಚಯ್ಯ ಎಚ್ಚರಿಕೆ

ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಹೋರಾಟ: ವೀಣಾಅಚ್ಚಯ್ಯ ಎಚ್ಚರಿಕೆ

CI   ¦    Feb 14, 2020 04:54:06 PM (IST)
ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಹೋರಾಟ: ವೀಣಾಅಚ್ಚಯ್ಯ ಎಚ್ಚರಿಕೆ

ಮಡಿಕೇರಿ: ಮಳೆಹಾನಿಯಿಂದ ಸಂಕಷ್ಟವನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯನ್ನು ಅನೇಕ ಸಮಸ್ಯೆಗಳು ಕಾಡುತ್ತಿದ್ದು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೀಘ್ರ ಪರಿಹಾರ ಕಾರ್ಯಗಳನ್ನು ಕೈಗೊಳ್ಳದಿದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟನ್ನು ರೂಪಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತಿಯಂಡ ವೀಣಾಅಚ್ಚಯ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರು ಬೀದಿಗೆ ಬೀಳುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಮಳೆಗಾಲಕ್ಕೂ ಮೊದಲೇ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.  ಸಿದ್ದಾಪುರ ಮತ್ತು ಕರಡಿಗೋಡು ವ್ಯಾಪ್ತಿಯಲ್ಲಿ ಹೊಳೆದಂಡೆಯ ನಿವಾಸಿಗಳು ಮನೆಗಳನ್ನು ಕಳೆದುಕೊಂಡಿದ್ದು, ಇವರುಗಳಿಗೆ ಸೂರು ಕಲ್ಪಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ನಿವೇಶನ ಮತ್ತು ವಸತಿ ಹಂಚಿಕೆ ವಿಚಾರದಲ್ಲಿ ಕೆಲವು ತಾಂತ್ರಿಕ ಕಾರಣಗಳಿಗಾಗಿ ಒಂದಷ್ಟು ಕಾಲವಕಾಶ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕರಣ ಮಾಡುತ್ತಿಲ್ಲ. ಒಂದು ವೇಳೆ ಸಂತ್ರಸ್ತರನ್ನು ಕಡೆಗಣಿಸಿದರೆ ಹೋರಾಟಕ್ಕೆ ಇಳಿಯುವುದು ಖಚಿತವೆಂದರು.

ಸಿದ್ದಾಪುರದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಧಿಕಾರಿಗಳು ನಿವೇಶನ ನೀಡುವ ಭರವಸೆ ನೀಡಿದ್ದಾರೆ. ಈ ಭರವಸೆ ಕೇವಲ ಹೇಳಿಕೆಗಳಿಗಷ್ಟೆ ಸಿಮೀತವಾಗಬಾರದು. ತಕ್ಷಣ ನಿರಾಶ್ರಿತರ ಪರವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

 ವಿಎಸ್‍ಎಸ್‍ಎನ್ ಬ್ಯಾಂಕುಗಳಲ್ಲಿ ಆರ್‍ಟಿಸಿ ಇರುವ ರೈತರಿಗೆ ರೂ.3 ಲಕ್ಷದ ವರೆಗೆ ಈ ಹಿಂದೆ ಸಾಲವನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಆರ್‍ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚಿನ ಮಂದಿ ಇದ್ದಲ್ಲಿ ಅಂತಹ ರೈತರಿಗೆ ಸಾಲ ನೀಡಲು ಸಾಧ್ಯವಿಲ್ಲವೆಂದು ಸತಾಯಿಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ವಿಎಸ್‍ಎಸ್‍ಎನ್ ಬ್ಯಾಂಕ್‍ಗಳು ಇಂತಹ ನಿರ್ಬಂಧ ವಿಧಿಸಿದಲ್ಲಿ ಬಹಳಷ್ಟು ರೈತರು ಸಾಲ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಕೊಡಗಿನ ಶೇ. 50 ರಷ್ಟು ಗದ್ದೆಗಳು ನಾಶವಾಗಿದೆ. ಇರುವ ಗದ್ದೆಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸರ್ಕಾರ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಭತ್ತಕ್ಕೆ ಬೆಂಬಲ ಬೆಲೆಯನ್ನು ನೀಡದ ಸರ್ಕಾರ ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿದೆ ಎಂದು ವೀಣಾಅಚ್ಚಯ್ಯ ಆರೋಪಿಸಿದರು. ಸಧ್ಯದಲ್ಲೇ ಸರ್ಕಾರ ಮಂಡಿಸುವ ಬಜೆಟ್‍ನಲ್ಲಿ ಕೊಡಗಿನ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.