ಕಾರಿಗೆ ಬೆಂಕಿ ಹಚ್ಚಿದ ನಾಲ್ವರು ವಶಕ್ಕೆ

ಕಾರಿಗೆ ಬೆಂಕಿ ಹಚ್ಚಿದ ನಾಲ್ವರು ವಶಕ್ಕೆ

LK   ¦    Mar 25, 2020 05:00:11 PM (IST)
ಕಾರಿಗೆ ಬೆಂಕಿ ಹಚ್ಚಿದ ನಾಲ್ವರು ವಶಕ್ಕೆ

ಕೆ.ಆರ್.ಪೇಟೆ: ತಾಲ್ಲೂಕಿನ ಸಾಸಲು ಗ್ರಾಮದಲ್ಲಿ  ರಾಜಕೀಯ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಾಸಲು ನಾಗೇಶ್ ಅವರ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭಾಗಶಃ ಸುಟ್ಟು ಹಾಕಿದ್ದ ಅದೇ ಗ್ರಾಮದ ಶಂಕಿತ ನಾಲ್ವರನ್ನು ವಿವಿಧ ಗ್ರಾಮಗಳಲ್ಲಿ  ಪತ್ತೆ ಹಚ್ಚಿರುವ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸಾಸಲು ಗ್ರಾಮದ ನಿವಾಸಿಗಳಾದ ವಿರೂಪಾಕ್ಷ(45), ಪುಟ್ಟ(40) ಮೊಗಣ್ಣ ಅಲಿಯಾಸ್ ನಂಜಪ್ಪ(50), ಶಂಭು ಅಲಿಯಾಸ್ ಮಂಜು(46) ಎಂಬುವರನ್ನು ಕಾರಿಗೆ ಬೆಂಕಿ ಹಚ್ಚಿದ ಶಂಕೆಯ ಮೇರೆಗೆ ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಮಾ.11ರಂದು ರಾತ್ರಿ 10ಗಂಟೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗೇಶ್ ಅವರು ಸುಮಾರು 8ಲಕ್ಷ ರೂ. ಬೆಲೆ ಬಾಳುವ ಹೊಸ ಕಾರನ್ನು ಸಾಸಲು ಗ್ರಾಮದ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದರು. ಅದೇ ದಿನ  ಮುಂಜಾನೆ ಸುಮಾರು 3ಗಂಟೆ ಸಮಯದಲ್ಲಿ ನಾಲ್ವರು ಕಿಡಿಗೇಡಿಗಳು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು. ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಶಬ್ದವು ಮನೆಯ ಹೊರಗಡೆ ಮಲಗಿದ್ದ ನಾಗೇಶ್ ಅವರ ತಾಯಿಗೆ ಕೇಳಿಸಿದಾಗ ಹೊರ ಬಂದು ನೋಡಲಾಗಿ ಕಾರು ಹೊತ್ತಿ ಉರಿಯುತ್ತಿತ್ತು. ಕೂಡಲೇ ಅಕ್ಕಪಕ್ಕದವರ ಸಹಾಯದಿಂದ ಕಾರಿಗೆ ನೀರು ಸುರಿದು ಬೆಂಕಿಯನ್ನು ನಂದಿಸಲಾಗಿತ್ತು. ಅಷ್ಟರೊಳಗೆ ಕಾರು ಭಾಗಶಃ ಸುಟ್ಟು ಹೋಗಿತ್ತು.

ಘಟನೆಯ ಸಂಬಂಧ  ಸಾಸಲು ನಾಗೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಿಕ್ಕೇರಿ ಪೊಲೀಸರು ತನಿಖೆ ಕೈಗೊಂಡಿದ್ದರು. ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಅದೇ ಸಾಸಲು ಗ್ರಾಮದ ನಾಲ್ವರು ಘಟನೆಯ ನಂತರ ಗ್ರಾಮದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೇರೆ ಬೇರೆ ಊರುಗಳಲ್ಲಿ ಪತ್ತೆ ಹಚ್ಚಿ ಕಿಕ್ಕೇರಿ ಪೊಲೀಸ್ ಠಾಣೆಗೆ ಕರೆತಂದು  ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದ್ದಾರೆ.