ಫ್ರೆಂಚ್ ಓಪನ್ ನಿಂದ ಹೊರ ನಡೆದ ರೋಜರ್ ಫೆಡರರ್

ಫ್ರೆಂಚ್ ಓಪನ್ ನಿಂದ ಹೊರ ನಡೆದ ರೋಜರ್ ಫೆಡರರ್

Jayashree Aryapu   ¦    Jun 07, 2021 04:27:29 PM (IST)
ಫ್ರೆಂಚ್ ಓಪನ್ ನಿಂದ ಹೊರ ನಡೆದ ರೋಜರ್ ಫೆಡರರ್

ಪ್ಯಾರಿಸ್: ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಬಂದಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಫ್ರೆಂಚ್ ಓಪನ್ 2021 ಟೆನಿಸ್ ಪಂದ್ಯಾವಳಿಯಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿರುವ ಹೊರತಾಗಿಯೂ ಅಚ್ಚರಿ ಬೆಳವಣಿಗೆಯಲ್ಲಿ ಫೆಡರರ್ ಟೂರ್ನಿಯಿಂದ ಹೊರ ಬಂದಿದ್ದಾರೆ. ಮೂಲಗಳ ಪ್ರಕಾರ ಗಾಯದ ಸಮಸ್ಯೆಯಿಂದಾಗಿ ಫೆಡರರ್ ಟೂರ್ನಿಯಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಕಳೆದ ಮೂರು ವರ್ಷಗಳಲ್ಲಿ ಫೆಡರರ್, ಆರು ಪಂದ್ಯಗಳನ್ನಾಡಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಫೆಡರರ್, 'ನನ್ನ ತಂಡದೊಂದಿಗೆ ಚರ್ಚಿಸಿದ ನಂತರ, ನಾನು ಇಂದು ಫ್ರೆಂಚ್ ಓಪನ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ.

ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗಳ ನಂತರ ಮತ್ತು ಒಂದು ವರ್ಷದ ರಿ-ಹ್ಯಾಬ್ (ಪುನಶ್ಚೇತನ ಕೇಂದ್ರ) ನಂತರ ನಾನು ನನ್ನ ದೇಹದ ಆರೋಗ್ಯದ ಕಡೆಗೆ ಗಮನ ನೀಡಬೇಕಿದೆ. ಚೇತರಿಕೆಯ ಹಾದಿಯಲ್ಲಿ ನಾನು ಬೇಗನೆ ಗುಣಮುಖನಾಗುವುದು ಬಹಳ ಮುಖ್ಯ. ಈಗಾಗಲೇ ಬೆಲ್ಟ್ ಧರಿಸಿ 3 ಪಂದ್ಯಗಳನ್ನು ಆಡಿದ್ದು ನನಗೆ ರೋಮಾಂಚನ ಅನುಭವ ನೀಡಿದೆ. ಮತ್ತೆ ಮೈದಾನಕ್ಕೆ ಮರಳುವುದಕ್ಕಿಂತ ದೊಡ್ಡ ಭಾವನೆ ಶೀಘ್ರದಲ್ಲೇ ಹಿಂದಿರುಗುತ್ತೇವೆ ಎಂದು ಹೇಳಿದ್ದಾರೆ.

ಇನ್ನು 39ರ ಹರೆಯದ ಚಾಂಪಿಯನ್ ಆಟಗಾರನೀಗ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ತಿಂಗಳಾಂತ್ಯದಲ್ಲಿ ಬಹುನಿರೀಕ್ಷಿತ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿದ್ದಾರೆ. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಟೂರ್ನಿಗೆ ಫಿಟ್ ಆಗಿರಲು ದೇಹಕ್ಕೆ ವಿಶ್ರಾಂತಿ ನೀಡಲು ಚಿಂತಿಸಿದ್ದಾರೆ.

ಇನ್ನು ನಿನ್ನೆ ಅಂದರೆ ಶನಿವಾರ ರಾತ್ರಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಫೆಡರರ್ ಅವರು, ಜರ್ಮನಿಯ ಡೊಮಿನಿಕ್ ಕೂಫರ್ ವಿರುದ್ಧ 7-6(5) 6-7(3) 7-6(4) 7-5ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರು. ಈ ಪಂದ್ಯ ಬರೊಬ್ಬರಿ 3 ಗಂಟೆ 36 ನಿಮಿಷ ನಡೆದಿತ್ತು. ಇದೂ ಕೂಡ ಫೆಡರ್ ಅವರ ಕಾಲಿನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.