ಅ.1ರಿಂದ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟ  

ಅ.1ರಿಂದ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟ  

LK   ¦    Sep 21, 2019 11:40:21 AM (IST)
ಅ.1ರಿಂದ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟ   

ಮೈಸೂರು: ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳಿಸಲು ಅಕ್ಟೋಬರ್ 1ರಿಂದ 4ರವರೆಗೆ ರಾಜ್ಯ ಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟ ಆಯೋಜಿಸಲಾಗಿದೆ. 

ಚಾಮುಂಡಿ ವಿಹಾರ್ ಕ್ರೀಡಾಂಗಣ ಹಾಗೂ ವಿವಿಧ ಮೈದಾನಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ರಾಜ್ಯದ 5 ವಿಭಾಗಗಳಿಂದ ಸುಮಾರು 4500 ಕ್ರೀಡಾಪಟುಗಳು ಹಾಗೂ 500 ತಾಂತ್ರಿಕ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ ಯುವ ಪೀಳಿಗೆಯಲ್ಲಿ ಆತ್ಮ ವಿಶ್ವಾಸ ಮತ್ತು ಸಾಹಸ ಪ್ರವೃತ್ತಿಯನ್ನು ಬೆಳೆಸುವ ದೃಷ್ಟಿಯಿಂದ ಸೆ. 29ರಿಂದ ಅಕ್ಟೋಬರ್ 8 ರವರೆಗೆ ದಸರಾ ಸಾಹಸೋತ್ಸವವನ್ನು ಆಯೋಜಿಸಲಾಗಿದೆ. 

ಈ ಬಾರಿ ವೈಟ್ ವಾಟರ್ ರ್ಯಾಫ್ಟಿಂಗ್ ಹಾಗೂ ಹಾಟ್ ಬಲೂನ್ ಹಾರಾಟ ಎಂಬ ಎರಡು ಪ್ರಕಾರದ ಸಾಹಸ ಕ್ರೀಡೆಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಉಳಿದಂತೆ ಕ್ರೀಡಾರೋಹಣ, ಸಾಹಸ ಮತ್ತು ಪ್ರಕೃತಿ ಅಧ್ಯಯನ ಶಿಬಿರ, ಬಾಡಿ ಜಾರ್ಬ್, ಜೆಟ್ ಸ್ಕೀ, ವಾಟರ್ ಜಾರ್ಬ್, ವಾಟರ್ ಸ್ಲೈಡ್, ಜಿಪ್ ಲೈನ್, ರ್ಯಾಪೆಲ್ಲಿಂಗ್ ಮೊದಲಾದ ಸಾಹಸ ಕ್ರೀಡೆಗಳು ನಡೆಯಲಿದೆ ಎಂದು ತಿಳಿಸಿದರು.

 ಶಾಸಕ ಎಲ್. ನಾಗೇಂದ್ರ ಮಾತನಾಡಿ, ವಸ್ತುಪ್ರದರ್ಶನ ಆವರಣದಲ್ಲಿರುವ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೆ. 22 ರಿಂದ ಕುಸ್ತಿ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಅಂದು ಕುಸ್ತಿ ಪಟುಗಳ ಜೋಡಿ ಕಟ್ಟಲಾಗುವುದು. ದಸರಾ ಕಿಶೋರ, ದಸರಾ ಕಂಠೀರವ, ದಸರಾ ಕೇಸರಿ ಹೆಸರಿನಲ್ಲಿ ಪುರುಷರು ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದರು. 

ಇದೇ ವೇಳೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ.ಕಲ್ಪನ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ದಸರಾ ಕ್ರೀಡಾಕೂಟ ಹಾಗೂ ಸಾಹಸ ಕ್ರೀಡೋತ್ಸವ ಉಪಸಮಿತಿ ಅಧ್ಯಕ್ಷ ದೊರೆಸ್ವಾಮಿ, ಕುಸ್ತಿ ಉಪಸಮಿತಿ ಅಧ್ಯಕ್ಷ ಜಗದೀಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಇದ್ದರು.

 ಸೆ.29ರಿಂದ ನಾಡಕುಸ್ತಿ ಪಂದ್ಯಾವಳಿ 

ದಸರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿಗಳು ಸೆ.29 ರಿಂದ ಅ.4 ರವರೆಗೆ ಒಟ್ಟು 6 ದಿವಸಗಳ ಕಾಲ ಮೈಸೂರಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿದಿನ ನಾಡಕುಸ್ತಿ ಪಂದ್ಯಾವಳಿಗಳು ಸಂಜೆ 3.30  ಗಂಟೆಯಿಂದ ನಡೆಯುತ್ತದೆ. ಈ ನಾಡಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯವನ್ನು ಸೆ. 22ರ ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಬಿ. ವಿ. ಕಾರಂತ ರಂಗಮಂದಿರದಲ್ಲಿ ನಡೆಯಲಿದೆ.

 ನಾಡ ಕುಸ್ತಿ ಜೋಡಿ ಕಟ್ಟುವ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಕುಸ್ತಿಪಟುಗಳು ಅಂದು ನಿಗಧಿತ ಸಮಯಕ್ಕೆ ತಮ್ಮ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ 2 ಭಾವಚಿತ್ರದೊಂದಿಗೆ ಭಾಗವಹಿಸತಕ್ಕದ್ದು. ಭಾಗವಹಿಸಿರುವ ಕುಸ್ತಿಪಟುಗಳ ಪೈಕಿ ಸೂಕ್ತ ಕುಸ್ತಿಪಟುಗಳ ಜೋಡಿಯನ್ನು ಕಟ್ಟಲಾಗುತ್ತದೆ. 

ನಾಡ ಕುಸ್ತಿ ಜೋಡಿ ಕಾರ್ಯಕ್ಕೆ ಆಗಮಿಸುವ ಎಲ್ಲಾ ಕುಸ್ತಿಪಟುಗಳು ತಪ್ಪದೇ ನಿಗದಿತ ಅರ್ಜಿಯನ್ನು ಭರ್ತಿ ಮಾಡುವುದರ ಜೊತೆಗೆ ತಾವು  ಹೊಂದಿರುವ ಬ್ಯಾಂಕ್ ಎಸ್.ಬಿ. ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು ಬ್ಯಾಂಕ್‍ನ ಐಎಫ್‍ಸಿ. ಕೋಡ್ ಕಾಣುವ ಹಾಗೆ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯನ್ನು ತಮ್ಮ ಅರ್ಜಿಯೊಂದಿಗೆ ಲಗತ್ತಿಸಿ ನೀಡುವುದು. ಹೆಚ್ಚಿನ ಮಾಹಿತಿಗಾಗಿ ಕುಸ್ತಿ ಉಪಸಮಿತಿಯ ಕಚೆÉೀರಿಯನ್ನು ಸಂಪರ್ಕಿಸಬಹುದಾಗಿದೆ.