ನಾಗ್ಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗಾಂಧಿ-ಮಂಡೇಲಾ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಬ್ಯಾಟಿಂಗ್ ನಡೆಸಿರುವ ಭಾರತ ಊಟದ ವಿರಾಮದ ವೇಳೆಗೆ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ಗಳಾದ ಮುರುಳಿ ವಿಜಯ್ (40) ಮತ್ತು ಶಿಖರ್ ಧವನ್ (12) ಔಟಾಗಿದ್ದಾರೆ. ಇನ್ನು ಚೇತೇಶ್ವರ್ ಪೂಜಾರಾ (18) ಮತ್ತು ನಾಯಕ ವಿರಾಟ್ ಕೊಹ್ಲಿ (11) ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
4 ವರ್ಷಗಳ ಹಿಂದೆ ನಲಿವಿನ ಕ್ಷಣಗಳನ್ನು ಹೊರಹೊಮ್ಮುವಂತೆ ಮಾಡಿದ ಕಾರಣಕ್ಕಾಗಿ ಮಾತ್ರ ದಕ್ಷಿಣ ಆಫ್ರಿಕಾಕ್ಕೆ ನಾಗ್ಪುರದ ನಂಟು ಸ್ಮರಣೀಯ. ಅಂದು ಆಮ್ಲ ದ್ವಿಶತಕ, ಕ್ಯಾಲಿಸ್ ಶತಕ ಬಾರಿಸಿ ತ್ರಿಶತಕದ ಜತೆಯಾಟ ದಾಖಲಿಸಿದ್ದರು. ಸ್ಟೇನ್ 10 ವಿಕೆಟ್ ಉಡಾಯಿಸಿದ್ದರು. ಆದರೆ ಅಂದಿನ ಇನ್ನಿಂಗ್ಸ್ ಗೆಲುವು ಈಗಲೂ ಹರಿಣಗಳಿಗೆ ಸ್ಫೂರ್ತಿ ನೀಡಲಿದೆ ಎಂಬುದಾಗಿ ಹೇಳಲು ಧೈರ್ಯ ಸಾಲದು.
ಆಫ್ರಿಕಾ ಪರ ಮೋರ್ನೆ ಮೊರ್ಕೆಲ್ ಮತ್ತು ಡೀನ್ ಎಲ್ಗರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಸಾಧಿಸಿದ್ದೆ. ಇನ್ನು ಈ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇನ್ನು ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಆಡುವ ಹನ್ನೊಂದರ ಬಳಗದಲ್ಲಿ ಅಲ್ಪ ಬದಲಾವಣೆಗಳನ್ನು ಮಾಡಿಕೊಂಡಿವೆ.
ಈ ಬಾರಿ ದಕ್ಷಿಣ ಆಫ್ರಿಕಾ ಸಂಪೂರ್ಣವಾಗಿ ಭಾರತದ ಸ್ಪಿನ್ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಈವರೆಗಿನ 3 ಇನ್ನಿಂಗ್ಸ್ಗಳಲ್ಲಿ ಗಳಿಸಿದ್ದು 184, 109 ಹಾಗೂ 214 ರನ್ ಮಾತ್ರ. ಅರ್ಥಾತ್, ಒಮ್ಮೆ ಮಾತ್ರ ಆಮ್ಲ ಪಡೆ ಇನ್ನೂರರ ಗಡಿ ದಾಟಿದೆ. ಬಹುಶಃ ಬೆಂಗಳೂರು ಟೆಸ್ಟ್ ಯಾವುದೇ ಅಡೆತಡೆ ಇಲ್ಲದೇ ನಡೆದದ್ದೇ ಆದರೆ ಆಗ ಕೂಡ ಸೋಲುವ ಸರದಿ ಪ್ರವಾಸಿಗರದ್ದಾಗುತ್ತಿತ್ತು ಎಂಬುದು ಮೊದಲ ದಿನದಾಟದಲ್ಲೇ ನಿಶ್ಚಿತವಾಗಿತ್ತು. ಒಟ್ಟಾರೆ ಬೆಕ್ಕು-ಇಲಿಯ ಆಟದಂತಾಗಿದೆ ಈ ಸರಣಿ!