ಮಡಿಕೇರಿ: 2016-17ನೇ ಸಾಲಿನ ಗೇಲ್ ಇಂಡಿಯನ್ ಸ್ಪೀಡ್ ಸ್ಟಾರ್ ಗಳ ಆಯ್ಕೆಗೆ ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯು ಮುಂದಾಗಿದೆ. ಈ ಸಂಬಂಧ ಕೊಡಗಿನಲ್ಲಿ ಸ್ಪೀಡ್ ಸ್ಟಾರ್ ಗಳ ಆಯ್ಕೆಯನ್ನು ಡಿಸೆಂಬರ್ 10ರಂದು ಕುಶಾಲನಗರ ಸಮೀಪದ ಕೂಡಿಗೆಯ ಕ್ರೀಡಾ ಪ್ರೌಢ ಶಾಲೆಯ ಸಿಂಥೆಟಿಕ್ ಮೈದಾನದಲ್ಲಿ ಹಮ್ಮಿಕೊಂಡಿದೆ.
ಭಾರತದ ಪೆಟ್ರೋಲಿಯಂ ಮತ್ತು ಗ್ಯಾಸ್ ಇಲಾಖೆಯ ಪ್ರ್ರಾಯೋಜಕತ್ವದಲ್ಲಿ ಕೊಡಗಿನ ಸ್ಪೀಡ್ ಸ್ಟಾರ್ ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಅಂದು ಬೆಳಿಗ್ಗೆ 8.30 ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಧನಂಜಯ್ ಅಗೋಳಿಕಜೆ ಅವರು ಕಳೆದ ವರ್ಷ ಕೇವಲ ದೇಶದ 53 ಜಿಲ್ಲೆಗಳಲ್ಲಿ ಈ ಆಯ್ಕೆ ನಡೆದಿದ್ದು, ಕೊಡಗಿನಲ್ಲಿ ನಡೆದ ಆಯ್ಕೆಯಲ್ಲಿ 773 ಮಂದಿ ಕ್ರೀಡಾಳುಗಳು ಭಾಗವಹಿಸುವದರೊಂದಿಗೆ ಅತ್ಯಧಿಕ ಸ್ಪರ್ಧಿಗಳು ಭಾಗವಹಿಸಿದ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿತ್ತು. ಇದರಲ್ಲಿ 26 ಮಂದಿ ನಿಗದಿಪಡಿಸಿದ ಸಮಯದಲ್ಲಿ ಓಡಿ ಪೂನಾದಲ್ಲಿ ನಡೆದ ರಾಜ್ಯಮಟ್ಟದಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಯ್ಕೆಗೆ 4 ಜನ ಸ್ಪರ್ಧಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು.
2020 ರಲ್ಲಿ ಜಪಾನ್ ನಲ್ಲಿ ನಡೆಯುವ ಟೋಕಿಯೊ ಒಲಂಪಿಕ್ಸ್ ಗೆ ಮತ್ತು 2024 ರ ಹೊತ್ತಿನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕಗಳನ್ನು ಗಳಿಸುವ ದೃಷ್ಟಿಯಿಂದ ಕಳೆದ 2015 ರಿಂದ ಭಾರತದ ಮೂಲೆ ಮೂಲೆಗಳಿಂದ ಯುವ ಉತ್ಸಾಹಿ ಪ್ರತಿಭಾನ್ವಿತ ಓಟಗಾರರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಒಟ್ಟು ಇಡೀ ದೇಶದಲ್ಲಿ 26 ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿರುವುದು ವಿಶೇಷವಾಗಿದೆ. ಈ ವರ್ಷ ಭಾರತದ 100 ಕೇಂದ್ರಗಳಲ್ಲಿ 27 ರಾಜ್ಯ 9 ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿಭಾನ್ವಿತರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
11 ರಿಂದ 14 ಮತ್ತು 15 ರಿಂದ 17 ವಯಸ್ಸಿನ ಹುಡುಗ ಹುಡುಗಿಯರಿಗೆ 100 ಮೀ, 200 ಮೀ. ಮತ್ತು 400 ಮೀ. ಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಿ ನಿಗದಿತ ಸಮಯದಲ್ಲಿ ಓಡುವ ಸ್ಪರ್ಧಾಳುಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವದು. ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಇದಕ್ಕೆ ಮೆಡಲ್ ಹಂಟರ್ ಎಂಬ ಸಂಸ್ಥೆಯು ತಾಂತ್ರಿಕ ಸಹಾಯವನ್ನು ನೀಡುತ್ತಿದೆ. ಕರ್ನಾಟಕ ರಾಜ್ಯದ 5 ಕೇಂದ್ರಗಳಲ್ಲಿ ಈ ಆಯ್ಕೆ ನಡೆಯುತ್ತಿದ್ದು, ಕೊಡಗು ಮಂಗಳೂರು, ಬೆಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ಕೊಡಗು ಜಿಲ್ಲೆಯೊಂದಿಗೆ ಮೈಸೂರು ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಮತ್ತು ಪಿಯುಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 11 ರಿಂದ 17 ವಯಸ್ಸಿನೊಳಗಿನ ಮಕ್ಕಳು ಆಯಾ ತಾಲೂಕಿನ ಬಿಇಓ ಕಚೇರಿಗಳಲ್ಲಿ ಸಿಗುವ ಅರ್ಜಿಗಳನ್ನು ಪಡೆದುಕೊಂಡು ಡಿ. 7 ರೊಳಗಾಗಿ ಮತ್ತೆ ಬಿಇಓ ಕಚೇರಿಗಳಿಗೆ ಸಲ್ಲಿಸಬೇಕು. ಜನನ ಪ್ರಮಾಣ ಪತ್ರಗಳನ್ನು ಶಾಲೆಯಲ್ಲಿ ಪರಿಶೀಲಿಸಿ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿದರು.