ಪ್ಯಾರಿಸ್: ಪ್ರತಿಷ್ಠಿತ ‘ಬ್ಯಾಲನ್ ಡಿ’ ಒರ್ ಪ್ರಶಸ್ತಿಯು ನಾಲ್ಕನೇ ಬಾರಿಗೆ ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ರಿಯಲ್ ಮ್ಯಾಡ್ರಿಡ್ ಅವರಿಗೆ ದೊರಕಿದೆ. ಈ ಮೂಲಕ ರೊನಾಲ್ಡೊ ಅವರು ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಸರಿಗಟ್ಟಿದ್ದಾರೆ.
ಕಳೆದ ವರ್ಷ 5ನೇ ಬಾರಿ ಅರ್ಜೆಂಟೀನ ಸೂಪರ್ ಸ್ಟಾರ್ ಮೆಸ್ಸಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಸುಮಾರು 10 ವರ್ಷಗಳಿಂದ ಬಾರ್ಸಿಲೋನ ಹಾಗೂ ರೊನಾಲ್ಡೊ ಮತ್ತು ಮೆಸ್ಸಿ ನಡುವೆ ಪ್ರಶಸ್ತಿಗಾಗಿ ಪೈಪೋಟಿ ಇದೆ. ರೊನಾಲ್ಡೋ ಚಿನ್ನದ ಚೆಂಡಿಗೆ 2008ರಲ್ಲಿ ಮೊದಲ ಬಾರಿಗೆ ಮುತ್ತಿಟ್ಟಿದ್ದು, ರೊನಾಲ್ಡೊ ಅವರು 51 ಗೋಲು 54 ಪಂದ್ಯಗಳಲ್ಲಿ ಬಾರಿಸಿದ್ದು, ಯುರೋ 2016ರ ಪ್ರಶಸ್ತಿಯನ್ನು ಪೋರ್ಚುಗಲ್ ತಂಡ ಪ್ರಪ್ರಥಮ ಬಾರಿ ಮತ್ತು ಚಾಂಪಿಯನ್ಸ್ ಲೀಗ್ ಟ್ರೋಫಿ 11ನೇ ಬಾರಿಗೆ ಜಯಿಸಲು ನಾಯಕತ್ವವನ್ನು ವಹಿಸಿ ತಂಡದ ಗೆಲುವಿಗೆ ಕಾರಣಕರ್ತರಾದರು.
ರೊನಾಲ್ಡೊ ಮೊದಲ ಸ್ಥಾನ ಪಡೆದರೆ, ಮೆಸ್ಸಿ ಎರಡನೆ ಹಾಗೂ ಫ್ರೆಂಚ್ ಸ್ಟ್ರೈಕರ್ ಅಂಟೋನಿಯೋ ಗ್ರಿಝ್ಮನ್ ಮೂರನೇ ಸ್ಥಾನವನ್ನು ಬ್ಯಾಲನ್ ಡಿ’ಒರ್ ಪ್ರಶಸ್ತಿಗಾಗಿ ನಡೆದ ಮತದಾನದಲ್ಲಿ ಗಳಿಸಿದ್ದಾರೆ. ವಿಶ್ವದ 173 ಪತ್ರಕರ್ತರು ಸೇರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ವಿಜೇತರನ್ನು ಆರಿಸುತ್ತಾರೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಮೆಸ್ಸಿ ಪಡೆದರೆ, 2013 ಮತ್ತು 2014ರಲ್ಲಿ ರೊನಾಲ್ಡೋ ಈ ಪ್ರಶಸ್ತಿಯನ್ನು ಗಳಿಸಿದ್ದಾರೆ.