ಪುಣೆ: ಭಾರತ ಕ್ರಿಕೆಟ್ ತಂಡ ಹಾಗೂ ವಿಶ್ವ ಕ್ರಿಕೆಟ್ ಕಂಡಂತಹ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ನಿಗದಿತ ಓವರ್ ಗಳ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿರುವುದು ಹಳೆಯ ಸಂಗತಿ. ಇದೀಗ ನಿವೃತ್ತಿಗೆ ನಿಜವಾದ ಕಾರಣವನ್ನು ಧೋನಿ ನೀಡಿದ್ದಾರೆ.
ಹೌದು.. ಧೋನಿ ಹೇಳುವ ಪ್ರಕಾರ ಭಾರತೀಯ ಕ್ರಿಕೆಟ್ ಗೆ ಮೂರು ಮಾದರಿಗಳ ತಂಡಕ್ಕೂ ಪ್ರತ್ಯೇಕ ನಾಯಕರಿರುವುದು ಸರಿ ಬರುವುದಿಲ್ಲ ಹಾಗಾಗಿ ನಿಗದಿತ ಓವರ್ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದೆ ಎಂದು ಹೇಳಿದ್ದಾರೆ.
ಪದತ್ಯಾಗದ ನಿರ್ಧಾರ ಬಳ ಹಿಂದೆಯೇ ತಾನು ತೆಗೆದುಕೊಂಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ಅದನ್ನು ತಿಳಿಸಿದ್ದು, ಇದನ್ನು ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ಹಾಗೂ ವಿರಾಟ್ ಕೊಹ್ಲಿ ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸಾರಥ್ಯ ವಹಿಸಿದ್ದಾರೆ. ಹಾಗೆನೇ ಏಕದಿನ ಮತ್ತು ಟಿ20 ಮಾದರಿಗೂ ಒಬ್ಬನೇ ನಾಯಕನಾದರೇ ತಂಡವನ್ನು ಉತ್ತಮವಾಗಿ ಮುನ್ನಡೆಸಬಹುದು ಎಂದು ಧೋನಿ ಹೇಳಿದ್ದಾರೆ.
ವಿಕೆಟ್ ಕೀಪರ್ ಯಾವಾಗಲೂ ತಂಡದ ಉಪನಾಯಕನಿದ್ದ ಹಾಗೆ. ನಾಯಕನಿಗೆ ಏನು ಬೇಕು ಎಂಬುದರ ಬಗ್ಗೆ ನಾನು ಸದಾ ಗಮನವಿಡುತ್ತೇನೆ. ನೂತನ ನಾಯಕನಾಗಿರುವ ಕೊಹ್ಲಿಗೆ ನಾಯಕತ್ವ ತ್ಯಜಿಸಿದರೂ ಸಲಹೆ ಸೂಚನೆಗಳನ್ನು ನೀಡುವ ಕೆಲಸ ಮುಂದುವರಿಸುತ್ತೇನೆ ಎಂದು ಧೋನಿ ಹೇಳಿದ್ದಾರೆ.