ಇಂದೋರ್: ಕ್ರೀಡಾಂಗಣದಲ್ಲಿ ಅಭಿಮಾನಿ ಬಾಲಕನೊಬ್ಬ ಆಟಗಾರ ರುದ್ರ ಪ್ರತಾಪ್ ಸಿಂಗ್ ರನ್ನು ಸೆಲ್ಫಿಗೆ ಆಹ್ವಾನಿಸಿದ್ದು, ಈ ಸಂದರ್ಭ ಆರ್ ಪಿ ಸಿಂಗ್ ಬಾಲಕನ ಮೊಬೈಲ್ ಕಿತ್ತೆಸೆದ ಘಟನೆ ಮುಂಬೈ ಮತ್ತು ಗುಜರಾತ್ ನಡುವಿನ ರಣಜಿ ಫೈನಲ್ ಪಂದ್ಯದ ವೇಳೆ ನಡೆದಿದೆ.
ರುದ್ರ ಪ್ರತಾಪ್ ಸಿಂಗ್ ರಣಜಿ ಫೈನಲ್ ಪಂದ್ಯದಲ್ಲಿ ವಿಕೆಟ್ ಒಂದನ್ನು ಪಡೆದು, ಇದರ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅವರು 300ನೇ ವಿಕೆಟ್ ಪಡೆದ ಸಾಧನೆ ಮಾಡಿದರು. ಇದೇ ಸಂದರ್ಭ ಸೆಲ್ಫಿ ಫೋಟೋಗೆ ಅಭಿಮಾನಿ ಬಾಲಕನೊಬ್ಬ ಆರ್ ಪಿ ಸಿಂಗ್ ರನ್ನು ಆಹ್ವಾನಿಸಿದ್ದು, ಬಾಲಕನ ಮೊಬೈಲ್ ಅನ್ನು ಆರ್ ಪಿ ಸಿಂಗ್ ಕಿತ್ತೆಸೆದು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸೆಲ್ಫಿಗಾಗಿ ಕರೆದ ಬಾಲಕ ಆರ್ ಪಿ ಸಿಂಗ್ ರನ್ನು ಕೆರಳಿಸುವ ಮಾತನ್ನು ಆಡಿರಬಹುದು ಎನ್ನಲಾಗುತ್ತಿದ್ದು, ಇದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.
ಇಂದೋರ್ ನಲ್ಲಿ ನಡೆಯುತ್ತಿದ್ದ ಪಂದ್ಯದ ಮೂರನೇ ದಿನವೂ ಕೂಡ ಆರ್ ಪಿ ಸಿಂಗ್ ಪ್ರೇಕ್ಷಕನೋರ್ವನಿಗೆ ಮಧ್ಯದ ಬೆರಳನ್ನು ತೋರಿಸಿ ಅಪಹಾಸ್ಯ ಮಾಡಿದ್ದು, ಇದೀಗ ಬಾಲಕನ ಮೊಬೈಲ್ ಕಿತ್ತೆಸೆಯುವುದರ ಮೂಲಕ ಸುದ್ದಿಯಲ್ಲಿದ್ದಾರೆ.