ಮೂಡುಬಿದಿರೆ: ಚೆನೈನ ಅಣ್ಣಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ 77ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಚಾಂಪಿಯನ್ ಶಿಪ್ ಬರುವಲ್ಲಿ ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ. ಅಖಿಲ ಭಾರತ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ನ ಇತಿಹಾಸದಲ್ಲಿ ಕಾಲೇಜೊಂದರ ಕ್ರೀಡಾಪಟುಗಳ ಈ ಸ್ಮರಣೀಯ ಸಾಧನೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ದಾಖಲೆಯ 178 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ 64 ಕ್ರೀಡಾಪಟುಗಳಲ್ಲಿ ಆಳ್ವಾಸ್ 55 ಮಂದಿ ಕ್ರೀಡಾಪಟುಗಳು, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ದೊರೆತ 12 ಚಿನ್ನ, 8 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಆಳ್ವಾಸ್ ಕ್ರೀಡಾಪಟುಗಳೇ ಪಡೆದಿರುವುದು ಗಮನಾರ್ಹ ಎಂದರು.
ಆಳ್ವಾಸ್ ಕ್ರೀಡಾಪಟುಗಳಿಂದ ಮೂರು ಕೂಟ ದಾಖಲೆ:
ಈ ಕೂಟದಲ್ಲಿ ಆಳ್ವಾಸ್ ನ 3 ಕ್ರೀಡಾಪಟುಗಳಿಂದ ಅಖಿಲ ಭಾರತ ವಿಶ್ವವಿದ್ಯಾನಿಲಯದ ಕೂಟ ದಾಖಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು. ಆಳ್ವಾಸ್ ನ ಕ್ರೀಡಾಪಟುಗಳಾದ ಧಾರುಣ್ – (ಒಲಂಪಿಯನ್) 400 ಮೀಟರ್ ಹರ್ಡಲ್ಸ್, ಶ್ರೀಜೀತ್ – ತ್ರಿಪಲ್ ಜಂಪ್, ಹರಿಭಕ್ಷ್ – 3,000 ಮೀ ಸ್ಟೀಪಲ್ಚೇಸ್ನಲ್ಲಿ ಕೂಟ ದಾಖಲೆಯನ್ನು ಮಾಡಿದ್ದಾರೆ. ಒಲಂಪಿಯನ್ ಧಾರುಣ್ಗೆ ಕೂಟದ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿ ಪಡೆದಿದ್ದಾರೆ.
ಕೊಯಮತ್ತೂರಿನಲ್ಲಿ ಆಳ್ವಾಸ್ ನಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕ್ರೀಡಾಪಟುಗಳಿಗೆ ವಸತಿಗೃಹವನ್ನು ಕಲ್ಪಿಸಲಾಗಿತ್ತು. ದ.ಕ.ಜಿಲ್ಲೆಯ ಅಡುಗೆ ಪರಿಣತರಿಂದ ಎಲ್ಲಾ 8 ದಿವಸಗಳ ಕಾಲ ವಿಶೇಷ ಊಟೋಪಚಾರದ ವ್ಯವಸ್ಥೆ. ವಸತಿಗೃಹ ಹಾಗೂ ಕ್ರೀಡಾಂಗಣಕ್ಕೆ ವಾಹನದ ಸೌಲಭ್ಯ, ಆಳ್ವಾಸ್ ಫಿಸಿಯೋಥೇರಪಿಯ 4 ತಜ್ಞ ವೈದ್ಯರಿಂದ ವಿಶ್ವವಿದ್ಯಾನಿಲಯದ ಎಲ್ಲಾ ಕ್ರೀಡಾಪಟುಗಳಿಗೆ ವೈದ್ಯಕೀಯ ಸೇವೆ ಸಹಿತ ಕ್ರೀಡಾಪಟುಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಆಳ್ವಾಸ್ ಪ್ರೋತ್ಸಾಹಿಸಿದೆ ಎಂದು ಡಾ. ಮೋಹನ ಆಳ್ವ ತಿಳಿಸಿದರು.