ಮೂಡುಬಿದಿರೆ: ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು ಮುಂದೆ ಬರುವುದಕ್ಕಿರುವ ಅವಕಾಶಗಳು. ಇದನ್ನರಿತು ಕೇಂದ್ರ ಸರಕಾರದಿಂದ ಪ್ರಧಾನಿಯವರು ದೇಶದಲ್ಲಿ ಸೂಕ್ತ ಕ್ರೀಡಾಳುಗಳನ್ನು ಆಯ್ಕೆಗೊಳಿಸುವ ಹಾಗೂ ಅವರಿಗೆ ತರಬೇತಿ ನೀಡುವ ಬಗ್ಗೆ ಯೋಜನೆ ರೂಪಿಸಿದ್ದಾರೆ’ ಎಂದು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಹೇಳಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ 2 ದಿನಗಳ 2020 ಹಾಗೂ 2024ರ ಒಲಂಪಿಕ್ ಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
‘ನಮ್ಮ ದೇಶ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಕೂಡಾ ನಾವು ಜಗತ್ತಿನ ಇತರ ದೇಶಗಳಿಗಿಂತ ಕ್ರೀಡೆಯಲ್ಲಿ ಹಿಂದುಳಿದಿದ್ದೇವೆ. ಅತ್ಯುತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ಆದರೆ ಅವರನ್ನು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದೊಂದಿಗೆ ಬೆಳೆಸುವ ಕಾರ್ಯವನ್ನು ಇದೀಗ ಹಮ್ಮಿಕೊಳ್ಳಲಾಗಿದೆ. 2020 ಹಾಗೂ 2024ರ ಒಲಂಪಿಕ್ಸ್ ಹಾಗೂ ಇತರ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ನಾವು ನಮ್ಮ ಶಕ್ತಿಯನ್ನು ಪ್ರಸ್ತುತಪಡಿಸಬೇಕಿದೆ’ ಎಂದರು.
‘ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ದೇಶವನ್ನು ಉನ್ನತಿಯತ್ತ ಕೊಂಡೊಯ್ಯಲು ವಿದ್ಯಾರ್ಥಿ ಸಮುದಾಯಕ್ಕೆ ಸಾಧ್ಯವಿದೆ. ಕ್ರೀಡಾಪಟುಗಳು ಏಕಾಗ್ರತೆಯಿಂದ ಗುರಿಯೆಡೆಗೆ ಸಾಗಬೇಕು. ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದೇಶದ ವಿವಿದೆಡೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಿರುವುದರ ಹಿಂದೆ ಸಂಸ್ಥೆಗೆ ಸೂಕ್ತ ವ್ಯಕ್ತಿಯ ನೇತೃತ್ವ ಹಾಗೂ ಮಾರ್ಗದರ್ಶನ ಕಾರಣವಾಗಿದೆ. ಈ ಯಶಸ್ಸಿನ ಹಿಂದಿರುವುದು ಶಿಸ್ತು ಮತ್ತು ಪರಿಶ್ರಮ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಶನಲ್ ಯುವ ಕೊ-ಓಪರೆಟಿವ್ ಅಧ್ಯಕ್ಷ ರಾಜೇಶ್ ಬಾಬುಲಾಲ್ ಪಾಂಡೆ ಮಾತನಾಡಿ, ‘ಯುವಕರಿಗೆ ಶಕ್ತಿ ತುಂಬುವುದೆಂದರೆ ಅದು ರಾಷ್ಟ್ರಕ್ಕೆ ಶಕ್ತಿ ತುಂಬಿದಂತೆ. ಕ್ರೀಡಾಕ್ಷೇತ್ರಕ್ಕೆ ಮಹತ್ವವನ್ನು ನೀಡಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಇದುವರೆಗೆ ದೇಶದ ವಿವಿದೆಡೆಗಳಿಂದ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಗಳಿಂದ ಆಯ್ಕೆಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡುವ ಭರವಸೆಯನ್ನು ಹೊಂದಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಮುಂದಿನ ನಾಲ್ಕು ಅಥವಾ 8 ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ತರಬೇತಿ ಉಚಿತವಾಗಿರುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಗೇಲ್ ಇಂಡಿಯಾದ ದಕ್ಷಿಣ ಭಾರತ ವಲಯದ ಮುಖ್ಯಸ್ಥ ಮಂಗೇಶ್ ಬೆಂಢ್ಕಲೆ, ತಮಿಳುನಾಡು ರಾಜ್ಯ ಸಂಚಾಲಕ ಕತಲಿ ಪೆರುಮಾಲ್, ಕೇರಳ ರಾಜ್ಯ ಸಂಚಾಲಕ ರಾಜೀವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಮಾರಂಭದ ಅತಿಥಿಗಳು ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಗೇಲ್ ಇಂಡಿಯಾ ಸ್ಪೀಡ್ ಸ್ಟಾರ್ನ ಕರ್ನಾಟಕ ರಾಜ್ಯ ಸಂಯೋಜಕ ರಮೇಶ್ ಕೆ. ಸ್ವಾಗತಿಸಿದರು. ಎಸ್.ಎಸ್. ನೋರೋನ್ಹ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.