ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕಗಳಿಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದು, ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕೊಹ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಕೊಹ್ಲಿ ಟಾಪ್ 10 ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದು, ತಮ್ಮ ಶತಕಗಳ ಸಂಖ್ಯೆಯನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 43ಕ್ಕೆ ಏರಿಸಿದ್ದು, ಮಾತ್ರವಲ್ಲದೆ ಈ ಪಟ್ಟಿಗೆ ಸೇರಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ.
ಭಾರತದ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಟ್ಟು 100 ಶತಕಗಳನ್ನು ಸಿಡಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ತಮ್ಮ ದಾಖಲೆಗಳನ್ನು ಯಾರು ಮುರಿಯಬಲ್ಲರು ಎಂಬ ಪ್ರಶ್ನೆಗೆ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಉತ್ತರಿಸಿದ ಸಚಿನ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಹೆಸರುಗಳನ್ನು ಹೇಳಿದ್ದು, ಇದರಂತೆ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ನ ಮೂಲಕ ಸಚಿನ್ ದಾಖಲೆಗಳನ್ನು ಹಿಂಬಾಲಿಸಿದ್ದಾರೆ.
ಕೊಹ್ಲಿ ಮತ್ತು ಸಚಿನ್ ಜೊತೆಗೆ ಭಾರತದ ಆಟಗಾರ ರಾಹುಲ್ ದ್ರಾವಿಡ್ ಕೂಡ 48 ಶತಕಗಳನ್ನು ಸಿಡಿಸುವ ಮೂಲಕ 8 ನೇ ಸ್ಥಾನದಲ್ಲಿ ಈ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದ ಅತೀ ಹೆಚ್ಚು ಶತಕಗಳಿಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿ ಸೇರಿರುವ ಕೊಹ್ಲಿ ವಯಸ್ಸು ಕೇವಲ 28 ವರ್ಷ. ವಿರಾಟ್ ಇದೇ ರೀತಿ ಬ್ಯಾಟಿಂಗ್ ನಲ್ಲಿ ತನ್ನ ವಿರಾಟ ರೂಪ ತೋರಿಸುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆಯನ್ನು ಹಿಂದಿಕ್ಕುವುದರಲ್ಲಿ ಸಂಶಯವೇ ಇಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿ:
1. ಸಚಿನ್ ತೆಂಡೂಲ್ಕರ್ (ಭಾರತ) 100 ಶತಕ
2. ರಿಕ್ಕಿ ಪಾಟಿಂಗ್ (ಆಸ್ಟ್ರೇಲಿಯಾ) 71 ಶತಕ
3. ಕುಮಾರ್ ಸಂಗಕ್ಕಾರ (ಶ್ರೀಲಂಕಾ) 63 ಶತಕ
4. ಜಾಕ್ ಕಾಲಿಸ್ (ದ.ಆಫ್ರಿಕಾ) 62 ಶತಕ
5. ಮಹೇಲಾ ಜಯವರ್ಧನೆ (ಶ್ರೀಲಂಕಾ) 54 ಶತಕ
6. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 53 ಶತಕ
7. ಹಶೀಮ್ ಆಮ್ಲಾ (ದ.ಆಫ್ರಿಕಾ) 49 ಶತಕ
8. ರಾಹುಲ್ ದ್ರಾವಿಡ್ (ಭಾರತ) 48 ಶತಕ
9. ಎಬಿಡಿ ವಿಲಿಯರ್ಸ್ (ದ.ಆಫ್ರಿಕಾ) 45 ಶತಕ
10. ವಿರಾಟ್ ಕೊಹ್ಲಿ (ಭಾರತ) 43 ಶತಕ