ಮೂಡುಬಿದಿರೆ: ಎಂ.ಕೆ. ಅನಂತರಾಜ್ ಅವರ ಸ್ಮರಣಾರ್ಥ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಮೈದಾನದಲ್ಲಿ ನಾಲ್ಕು ದಿನ ನಡೆದ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನ ಮಹಿಳೆಯ ವಿಭಾಗದಲ್ಲಿ ನಿರೀಕ್ಷೆಯಂತೆ ಅತಿಥೇಯ ಕರ್ನಾಟಕ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದು, ಕಳೆದ ಬಾರಿಯ ಪುರುಷರ ಚಾಂಪಿಯನ್ ಇಂಡಿಯನ್ ರೈಲ್ವೇಸ್ ಅಗ್ರಸ್ಥಾನವನ್ನು ಪಡದಿವೆ. ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು ತೃತೀಯ ಸ್ಥಾನ ಗಳಿಸಿದೆ.
ಪುರುಷರ ವಿಭಾಗದಲ್ಲಿ ತಮಿಳುನಾಡು ದ್ವಿತೀಯ, ತೆಲಂಗಾಣ ನಾಲ್ಕನೇ ಸ್ಥಾನ ಗಳಿಸಿದರೆ, ಮಹಿಳೆಯ ವಿಭಾಗದಲ್ಲಿ ತಮಿಳುನಾಡು ದ್ವಿತೀಯ, ಛತೀಸ್ ಗಡ್ ತೃತೀಯ ಸ್ಥಾನವನ್ನು ಅಲಂಕರಿಸಿದೆ.ಮಹಿಳೆಯರ ಫೈನಲ್ ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು 35-17, 35-17 ನೇರ ಸೆಟ್ ಗಳಿಂದ ಪರಭಾವಗೊಳಿಸಿದೆ. ಪುರುಷರ ವಿಭಾಗದಲ್ಲಿ ಇಂಡಿಯನ್ ರೈಲ್ವೇಸ್ ತಂಡವು ತಮಿಳುನಾಡು ತಂಡವನ್ನು 29-31,35-29,35-27 ಅಂಕಗಳೊಂದಿಗೆ ಸೋಲಿಸಿದೆ. ಸೆಮಿಫೈನಲ್ ಪುರುಷರ ವಿಭಾಗದಲ್ಲಿ ಅತಿಥೇಯ ಕರ್ನಾಟಕ ತಂಡವನಯಿಂಡಿಯನ್ ರೈಲ್ವೇಸ್ ತಂಡವು ಸೋಲಿಸಿ ಫೈನಲ್ ಗೇರಿತು. ಮತ್ತೊಂದೆಡೆ ತಮಿಳುನಾಡು ತಂಡವು ತೆಲಂಗಾಣ ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತಲುಪಿತು. ಮಹಿಳೆಯ ವಿಭಾಗದ ಸೆಮಿಫೈನಲ್ನಲ್ಲಿ ಅತಿಥೇಯ ಕರ್ನಾಟಕ ತಂಡವು ಆಂದ್ರ ಪ್ರದೇಶವನ್ನು ಸೋಲಿಸಿದರೆ, ಇನ್ನೊಂದು ಪಂದ್ಯದಲ್ಲಿ ತಮಿಳುನಾಡು ತಂಡವು ಛತೀಸ್ಗಡ್ ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ತಲುಪಿತು.
ಗೆಲುವಿನಲ್ಲಿ ಆಳ್ವಾಸ್ ಶ್ರಮ:
ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ಕರ್ನಾಟಕ ಮಹಿಳಾ ತಂಡದಲ್ಲಿ ಆಳ್ವಾಸ್ ಕಾಲೇಜಿನ 8 ಕ್ರೀಡಾಪಟುಗಳಿದ್ದರೆ, 2012ರ ನಂತರ ಇದೇ ಮೊದಲ ಬಾರಿಗೆ ತೃತೀಯ ಸ್ಥಾನ ಗಳಿಸಿರುವ ಕರ್ನಾಟಕ ಪುರುಷರ ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವಲ್ಲಿ ಶ್ರಮಿಸಿದರು. ಕರ್ನಾಟಕ ಮೂವರಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಈ ಕ್ರೀಡಾಕೂಟದಲ್ಲಿ ಲಭಿಸಿದ್ದು, ವಿಜೇತ ಕ್ರೀಡಾಪಟುಗಳೆಲ್ಲ ಆಳ್ವಾಸ್ ನವರು ಎನ್ನುವುದು ಮತ್ತೊಂದು ಹೆಗ್ಗಳಿಕೆ. ಕರ್ನಾಟಕ ಮಹಿಳಾ ತಂಡದ ನಾಯಕಿ ಆಳ್ವಾಸ್ ನ ಕಾವ್ಯ.ಆರ್, ಎಂ.ಪಿ ರಂಜಿತಾ ಹಾಗೂ ಪುರುಷರ ವಿಭಾಗದಲ್ಲಿ ಆಳ್ವಾಸ್ ನ ಉಲ್ಲಾಸ್ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದಿದ್ದಾರೆ. ಚಾಂಪಿಯನ್ ಕರ್ನಾಟಕ ಮಹಿಳಾ ತಂಡವು ಅಖಿಲ ಭಾರತ ವಿ.ವಿ ಬಾಲ್ ಬ್ಯಾಡ್ಮಿಂಟನ್ ನಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ದೇಶದ ಬಲಿಷ್ಠ ತಂಡವಾಗಿ ಮೂಡಿಬಂದಿದೆ.
ಆತಿಥೇಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ನಡೆದಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ರೈಲ್ವೇ ಸ್ಪೋರ್ಟ್ಸ್ ಬೋರ್ಡ್ ಪ್ರೊಮೋಶನ್ ಕಾರ್ಯದರ್ಶಿ ರೇಖಾ ಯಾದವ್, ಶಾಸಕ, ಮಾಜಿ ಸಚಿವ ವಿನಯಕುಮಾರ ಸೊರಕೆ, `ಮೂಡಾ’ ಅಧ್ಯಕ್ಷ ಸುರೇಶ್ ಪ್ರಭು, ಕ್ರೀಡಾಪ್ರೋತ್ಸಾಹಕರಾದ ನಾರಾಯಣ ಪಿ. ಎಂ., ಮೊಹಮ್ಮದ್ ಮುಸ್ತಫಾ, ಉದಯ ಶೆಟ್ಟಿ ಮುನಿಯಾಲ್, ರಾಷ್ಟ್ರೀಯ ಬಾಲ್ಬ್ಯಾಡ್ಮಿಂಟನ್ ಎಸೋಸಿಯೇಶನ್ ಕಾರ್ಯದರ್ಶಿ ರಾಜಾರಾವ್, ಕರ್ನಾಟಕ ಬಾ.ಬ್ಯಾ. ಎಸೋಸಿಯೇಶನ್ ಕಾರ್ಯದರ್ಶಿ ದಿನೇಶ್ ಕುಮಾರ್ ಭಾಗವಹಿಸಿದ್ದರು.