ಪುಣೆ: ಪುಣೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಆಟ ಎಂದು ಹೇಳಲಾಗುತ್ತಿದೆ.
ಪ್ರಥಮ ಇನಿಂಗ್ಸ್ ನಲ್ಲಿ 261 ರನ್ ಗುರಿ ಬೆನ್ನತ್ತಿದ್ದ ಕೊಹ್ಲಿ ಪಡೆ 37 ಓವರ್ಗಳಲ್ಲಿ 101 ರನ್ ಗಳಿಸಿ 8 ವಿಕೆಟ್ ಕಳೆದುಕೊಂದು ಆರಂಭಿಕ ಆಘಾತ ಎದುರಿಸಿದೆ. ಮುರುಳಿ ವಿಜಯ್ 10, ಕೆ.ಎಲ್ ರಾಹುಲ್ 64, ಪೂಜರಾ 06, ವಿರಾಟ್ ಕೊಹ್ಲಿ 00, ಆರ್ ಅಶ್ವಿನ್ 01, ವೃದ್ಧಿಮಾನ್ ಸಹಾ 00, ಜಯಂತ್ ಯಾದವ್ 02, ರವೀಂದ್ರ ಜಡೇಜ ಬ್ಯಾಟಿಂಗ್ 02, ಉಮೇಶ್ ಯಾದವ್ ಬ್ಯಾಟಿಂಗ್ 02 ರನ್ ಗಳಿಸಿದ್ದಾರೆ.
ಕೊಹ್ಲಿ ಪಡೆ ಕೇವಲ 11 ರನ್ ಗಳ ಅಂತರದಲ್ಲಿ ಬರೊಬ್ಬರಿ 7 ವಿಕೆಟ್ ಕಳೆದುಕೊಂಡಿದ್ದು, ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು. 1989-90ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್ ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿತ್ತು. ಇದು ಭಾರತ ತಂಡದ ಅತ್ಯಂತ ಕೆಟ್ಟ ಪ್ರದರ್ಶನವಾಗಿತ್ತು. ಇದೀಗ ಪುಣೆಯಲ್ಲಿ ಕೇವಲ 11 ರನ್ ಗಳ ಅಂತರದಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು ಅದಕ್ಕಿಂತಲೂ ಕಳಪೆ ಆಟವನ್ನು ಪ್ರದರ್ಶಿಸಿದೆ.
5 ಮತ್ತು 7ನೇ ವಿಕೆಟ್ ನ ಅಂತರದಲ್ಲಿ ತಂಡ ಕಲೆಹಾಕಿದ್ದು ಕೇವಲ 1 ರನ್..1 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿದೆ. ಇದೂ ಕೂಡ ತಂಡದ ಕಳಪೆಯಾಟವಾಗಿದ್ದು, ಈ ಹಿಂದೆ 2005-06ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 1 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.