ಮೂಡುಬಿದಿರೆ: ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್ ನಲ್ಲಿ ಫೆ.18ರಿಂದ 20ರವರೆಗೆ ನಡೆದ 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್ಶಿಪ್ ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವೀರಭದ್ರ ಎಂ. ಚಿನ್ನದ ಪದಕ ಗಳಿಸಿದ್ದು, ಕರ್ನಾಟಕದ ಮಲ್ಲಕಂಬ ಇತಿಹಾಸದಲ್ಲೇ ಇದು ಪ್ರಪ್ರಥಮ ಚಿನ್ನದ ಪದಕವಾಗಿದೆ.
14 ವಯೋಮಿತಿ ಹಾಗೂ 18ರ ವಯೋಮಿತಿ ಬಾಲಕರ ವಿಭಾಗ, ಬಾಲಕಿಯರ 12 ವಯೋಮಿತಿ, 16ರ ವಯೋಮಿತಿ ವಿಭಾಗದಲ್ಲಿ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಕರ್ನಾಟಕ ತಂಡ ಸಾಧನೆ ಮೆರೆದಿದೆ. 12 ವಯೋಮಿತಿ ವೈಯಕ್ತಿಕ ವಿಭಾಗದ 5ನೇ ಸ್ಥಾನವು ಆಳ್ವಾಸ್ ನ ಅನನ್ಯಾಳ ಪಾಲಾಗಿದೆ.
ಕರ್ನಾಟಕ ತಂಡದ 32 ಮಂದಿ ಕ್ರೀಡಾಪಟುಗಳಲ್ಲಿ 18 ಮಂದಿ ವಿದ್ಯಾರ್ಥಿಗಳು ಆಳ್ವಾಸ್ ನವರು ಎನ್ನುವುದು ಗಮನಾರ್ಹ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪ್ರಾಥಮಿಕ ವಿಭಾಗದಿಂದ ಪದವಿಯವರೆಗೆ 60 ಮಂದಿ ವಿದ್ಯಾರ್ಥಿಗಳನ್ನು ಮಲ್ಲಕಂಬಕ್ಕಾಗಿ ದತ್ತು ಪಡೆದು ಅವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಳ್ವಾಸ್ ಹಾಗೂ ಕರ್ನಾಟಕ ತಂಡದ ಮಲ್ಲಕಂಬ ಸ್ಪರ್ಧೆಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.