ಬೇಸಿಗೆ, ಮಳೆಗಾಲ ಎನ್ನದೆ ಎಲ್ಲ ಸಮಯದಲ್ಲೂ ಒಂದಲ್ಲ ಕ್ರೀಡೆಯನ್ನು ಆಡುತ್ತಾ ಕ್ರೀಡಾಜಿಲ್ಲೆಯಾಗಿ ಗಮನಸೆಳೆಯುತ್ತಿರುವ ಕೊಡಗಿನಲ್ಲಿ ಈಗ ಕ್ರೀಡೆಯ ಸುಗ್ಗಿಕಾಲ. ಈಗಾಗಲೇ ಲಿಮ್ಕಾ ದಾಖಲೆ ಮಾಡಿ ಗಿನ್ನಿಸ್ ದಾಖಲೆಯತ್ತ ಮುನ್ನುಗ್ಗುತ್ತಿರುವ ಇಲ್ಲಿನ ಕೊಡವ ಕುಟುಂಬಗಳ ಹಾಕಿನಮ್ಮೆ( ಹಾಕಿ ಉತ್ಸವ) ಏ.17ರಿಂದ ಆರಂಭಗೊಳ್ಳುತ್ತಿದ್ದು, ಸುಮಾರು 25 ದಿನಗಳ ಕಾಲ ನಡೆಯಲಿದೆ.
ಈ ವರ್ಷ ಹಾಕಿ ಉತ್ಸವ 21ನೇ ವರ್ಷದಾಗಿದ್ದು, ಬಿದ್ದಾಟಂಡ ಕುಟುಂಬ ಸಾರಥ್ಯವನ್ನು ವಹಿಸಿಕೊಂಡಿದ್ದು, ನಾಪೋಕ್ಷುನಲ್ಲಿ ನಡೆಸಲಾಗುತ್ತಿದೆ. ಈ ಬಾರಿಯ ಹಾಕಿ ಉತ್ಸವದತ್ತ ಹೆಚ್ಚಿನ ನಿರೀಕ್ಷೆಯನ್ನು ಹೊಂದಲಾಗಿದೆ. ಅಷ್ಟೇ ಅಲ್ಲದೆ ಕೊಡವ ಕುಟುಂಬಗಳ ಸುಮಾರು 300 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಪಂದ್ಯಾವಳಿಗೆ ಜಿಲ್ಲೆಯಾದ್ಯಂತ ಇರುವ ಕೊಡವ ತಂಡಗಳು ಭಾಗವಹಿಸಲಿರುವುದರಿಂದ ಗ್ಯಾಲರಿ ನಿರ್ಮಾಣ, ಮೈದಾನದ ಸಿದ್ಧತೆ. ಅಂಗಡಿ ಮಳಿಗೆಗಳು, ಸೇರಿದಂತೆ ಪಂದ್ಯಾವಳಿಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ತಂಡಗಳು ಭಾಗವಹಿಸುವ ಸಾಧ್ಯತೆ ಹೆಚ್ಚು ಇರುವುದರಿಂದ ಮೂರು ಮೈದಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ. ನಾಪೋಕ್ಲುನಲ್ಲಿ ಈ ಹಿಂದೆ ನಡೆದ ಎಲ್ಲ ಪಂದ್ಯಾವಳಿಗಳು ಯಶಸ್ವಿಯಾಗಿದ್ದು, ಈ ಹಿಂದೆ ಕಲಿಯಂಡ ಕುಟುಂಬ ಸಾರಥ್ಯ ವಹಿಸಿದ್ದ ಪಂದ್ಯಾವಳಿಯಲ್ಲಿ ಸುಮಾರು 281 ತಂಡಗಳು ಪಾಲ್ಗೊಂಡು ಕ್ರೀಡಾಪ್ರೇಮಿಗಳ ಮನಸೆಳೆದಿತ್ತು. ಈ ಬಾರಿ ಸುಮಾರು ಮುನ್ನೂರು ತಂಡಗಳು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ಮಾಣಗೊಳ್ಳಲಿದೆ ಎಂಬ ಆಲೋಚನೆ ಆಯೋಜಕರದ್ದಾಗಿದೆ.
ಹಾಕಿ ಪಂದ್ಯಾವಳಿಯ ಕುರಿತು ಪತ್ರಿಕೆ, ವೆಬ್ಸೈಟ್, ಬ್ರೋಚರರ್ಸ್ ಮೂಲಕ ಎಲ್ಲೆಡೆ ಪ್ರಚುರಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ಆಟವಾಡುವ ತಂಡಗಳ ನೋಂದಣಿಗೆ ಅನುಕೂಲವಾಗುವಂತೆ ಜಿಲ್ಲೆಯ ಸುಮಾರು 38 ಕಡೆ ನೋಂದಣಿ ಮಾಡಲು ಅನುಕೂಲವಾಗುವಂತೆ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆಟವನ್ನು ನೋಡಲು ಆಗಮಿಸುವ ಕ್ರೀಡಾಪ್ರೇಮಿಗಳು ಕುಳಿತು ಪಂದ್ಯಾವಳಿಯನ್ನು ನೋಡಲು ಅನುಕೂಲವಾಗುವಂತೆ ಸುಮಾರು 40 ಸಾವಿರ ಮಂದಿ ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಸುಮಾರು 40 ಸಾವಿರ ಆಸನವುಳ್ಳ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ. ತಂಡದಲ್ಲಿ ಪುರುಷರು, ಮಹಿಳೆಯರು ಎಂಬ ಪ್ರತ್ಯೇಕ ತಂಡವಿಲ್ಲದೆ ಕುಟಂಬದ ತಂಡಗಳಲ್ಲಿ ಮಿಶ್ರವಾಗಿ ಆಡಬಹುದಾಗಿದೆ.
ಪೊಲೀಸ್ ಇಲಾಖೆ, ಸೇನಾಪಡೆ, ಅಲ್ಲದೆ ಹಾಕಿ ಚಾಂಪಿಯನ್ಗಳು, ಬೆಳೆಗಾರರು ಎಲ್ಲರೂ ತಮ್ಮ ಕುಟುಂಬದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಒಂದೆಡೆ ಹಾಕಿ ಕ್ರೀಡಾಭಿಮಾನಿಗಳು ಹಾಕಿನಮ್ಮೆಯ ದಿನಗಣನೆ ಮಾಡುತ್ತಿದ್ದರೆ, ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳು ತಮ್ಮ ಊರುಗಳಲ್ಲಿ ಆಟದ ಅಭ್ಯಾಸದಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.