ಮಡಿಕೇರಿ: ಒಂದೆಡೆ ಕೊಡವ ಕುಟುಂಬಗಳ ಕೌಟುಂಬಿಕ ಬಿದ್ದಾಟಂಡ ಕಪ್ ಹಾಕಿ ನಾಪೋಕ್ಲಿನಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ದಕ್ಷಿಣ ಕೊಡಗಿನ ಬಾಳಲೆಯಲ್ಲಿ ಅಳಮೇಂಗಡ ಕಪ್ ಕ್ರಿಕೆಟ್ಗೆ ಸಿದ್ಧತೆಗಳು ನಡೆದಿದ್ದು, ಏ.24ರಂದು ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತಿದೆ.
ಈ ಬಾರಿ ಅಳಮೇಂಗಡ ಕುಟುಂಬ ಪಂದ್ಯಾವಳಿಯ ಸಾರಥ್ಯ ವಹಿಸಿದ್ದು, 220 ತಂಡಗಳು ಪಾಲ್ಗೊಳ್ಳುತ್ತಿವೆ. ಈಗಾಗಲೇ ಅಳಮೇಂಗಡ ಕ್ರಿಕೆಟ್ ಕಪ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರು ಪಂದ್ಯಾವಳಿಯ ಟೈಸ್ ಬಿಡುಗಡೆಗೊಳಿಸಿದ್ದು, 18ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಅನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರತ್ಯೇಕವಾಗಿ ಪಂದ್ಯಗಳು ನಡೆಯಲಿರುವುದಾಗಿ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದ ದಿನ ಬಾಳೆಲೆ ಇಲೆವೆನ್ ಹಾಗೂ ಅಳಮೇಂಗಡ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ನಂತರ ಅಳಮೇಂಗಡ ಕ್ರಿಕೆಟ್ ಕಪ್ನ ಒಂದು ಪಂದ್ಯ ನಡೆಯಲಿರುವುದಾಗಿ ಹೇಳಿದ್ದಾರೆ. ಬಿದ್ದಾಟಂಡ ಹಾಕಿ ನಮ್ಮೆಯಲ್ಲಿ ಆಟವಾಡುತ್ತಿರುವ ತಂಡಗಳು ಕ್ರಿಕೆಟ್ ಕಪ್ನಲ್ಲಿ ಪಾಲ್ಗೊಳ್ಳಲಿರುವುದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಟೈಸ್ ಬಿಡುಗಡೆ ಮಾಡಲಾಗಿದೆ.
ಉದ್ಘಾಟನೆಯಂದು ಬಾಳೆಲೆ ಗಣಪತಿ ಗುಡಿಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮೈದಾನದಲ್ಲಿ ಸಮಾವೇಶಗೊಂಡು ಸಭಾ ಕಾರ್ಯಕ್ರಮ ನಡೆಸಲಾಗುವದು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ, ಅಳಮೇಂಗಡ ಕುಟುಂಬದ ಹಿರಿಯರಾದ ಪೊನ್ನಪ್ಪ, ಕುಟುಂಬದ ಅಧ್ಯಕ್ಷ ಅಳಮೇಂಗಡ ವಿವೇಕ್, ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು. ಮೇ 20 ರಂದು ವಿರಾಮದ ನಂತರ ಮೇ 21 ರಂದು ಅಂತಿಮ ಹಣಾಹಣಿ ನಡೆಯಲಿದೆ. ಉದ್ಘಾಟನಾ ದಿನದಂದು ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.