ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.
ಲೀಗ್ ಹಂತದ ಪಂದ್ಯದಲ್ಲಿ ಈಗಾಗಲೇ ಪಾಕಿಸ್ತಾನ ಸೋಲನ್ನನುಭವಿಸಿದ್ದು, ಫೈನಲ್ ನಲ್ಲಿ ಭಾರತದ ವಿರುದ್ಧ ಗೆದ್ದು, ಸೇಡು ತೀರಿಸಿಕೊಳ್ಳುವ ಮೂಲಕ ತನ್ನ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡಲು ಕಾಯುತ್ತಿದ್ದರೆ, ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ತನ್ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡಲಿದೆ. ಈ ಬಾರಿ ಪ್ರಶಸ್ತಿ ಗೆದ್ದರೆ ಟೀಂ ಇಂಡಿಯಾ ಅಗ್ರ ಸ್ಥಾನವನ್ನು ಅಲಂಕರಿಸಲಿದೆ.
ಬೌಲಿಂಗ್ ನಲ್ಲಿ ಉಭಯ ತಂಡಗಳ ಬಲಾಬಲ ಸಮಬಲವಾಗಿದ್ದರೆ, ವಿಶ್ವದಲ್ಲೇ ಬಲಿಷ್ಟ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಖ್ಯಾತಿ ಭಾರತಕ್ಕಿದೆ. ಉಭಯ ತಂಡಗಳು ಫೀಲ್ಡಿಂಗ್ ನಲ್ಲಿ ಸಮನಾಗಿದ್ದು, ಒಟ್ಟಿನಲ್ಲಿ ಸಾಂಪ್ರದಾಯಿಕ ವೈರಿಗಳಾದ ಭಾರತ- ಪಾಕಿಸ್ತಾನ ಪಂದ್ಯ ನಿಜಕ್ಕೂ ಕ್ರಿಕೆಟ್ ಪ್ರೇಮಿಗಳಿಗೆ ಯಾವ ರೀತಿಯ ಮನರಂಜನೆ ನೀಡಲಿದೆ ಎಂದು ಕಾದುನೋಡಬೇಕಿದೆ.