ಅಡಿಲೇಡ್: ಗೆಲ್ಲಲೇಬೇಕಾಗಿದ್ದ ಮಹತ್ವದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಆರು ವಿಕೆಟ್ ಗಳಿಂದ ಪರಾಭವಗೊಳಿಸಿದೆ.
ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಶತಕ ಮತ್ತು ಮಹೇಂದ್ರ ಸಿಂಗ್ ಧೋನಿ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ಗೆಲುವು ದಾಖಲಿಸಿಕೊಂಡಿತು.
ಮೂರು ಪಂದ್ಯಗಳ ಸರಣಿಯು 1-1ರ ಸಮಬಲದಲ್ಲಿದೆ. ಮೂರನೇ ಹಾಗೂ ಅಂತಿಮ ಪಂದ್ಯವು ಮೆಲ್ಬೊರ್ನ್ ದಲ್ಲಿ ನಡೆಯಲಿದೆ.
299 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್(32) ವಿಕೆಟನ್ನು ಬೇಗನೆ ಕಳಕೊಂಡಿತು. ಇದರ ಬಳಿಕ ರೋಹಿತ್ ಶರ್ಮಾ ಮತ್ತು ಕೊಹ್ಲಿ ಉತ್ತಮ ಜತೆಯಾಟ ನಡೆಸಿ ಆರಂಭಿಕ ಆಘಾತದಿಂದ ಚೇತರಿಸುವಂತೆ ನೋಡಿಕೊಂಡರು. ಶರ್ಮಾ 43 ರನ್ ಮಾಡಿ ನಿರ್ಗಮಿಸಿದರು.
ಅಂಬಾಟಿ ರಾಯುಡು 24 ರನ್ ಮಾಡಿ ಪೆವಿಲಿಯನ್ ದಾರಿ ಹಿಡಿದ ಬಳಿಕ ಧೋನಿ ಮತ್ತು ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊಹ್ಲಿ ಏಕದಿನದಲ್ಲಿ 39ನೇ ಶತಕ ಸಿಡಿಸಿದರು.
112 ಎಸೆತಗಳಲ್ಲಿ ಐದು ಬೌಂಡರಿ ಮತ್ತು 2 ಸಿಕ್ಸ್ ಸಹಿತ 104 ರನ್ ಬಾರಿಸಿ ನಿರ್ಗಮಿಸಿದರು. ಇದರ ಬಳಿಕ ಧೋನಿ ಮತ್ತು ಕಾರ್ತಿಕ್ ತಂಡಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಓವರ್ ನಲ್ಲಿ ಗೆಲುವಿಗೆ ಏಳು ರನ್ ಬೇಕಿದ್ದಾಗ ಧೋನಿ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಶಾನ್ ಮಾರ್ಷ್ ಶತಕ(131) ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.