ಮುಂಬಯಿ: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಕ್ಕೆ ಯಾವುದೇ ಹಿತಾಸಕ್ತಿ ಸಂಘರ್ಷವಾಗುವುದಿಲ್ಲ ಎಂದು ಆಡಳಿತ ಸಮಿತಿ(ಸಿಒಎ) ಸದಸ್ಯ ರವಿ ಥೋಡ್ಗೆ ತಿಳಿಸಿದರು.
ದ್ರಾವಿಡ್ ಅವರ ವಿಚಾರದಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ. ಅವರಿಗೆ ನೋಟಿಸ್ ಸಿಕ್ಕಿದೆ. ನಾವು ಅವರ ಆಯ್ಕೆಯನ್ನು ದೃಢಪಡಿಸಿದ್ದೇವೆ. ಯಾಕೆಂದರೆ ಯಾವುದೇ ರೀತಿಯ ಹಿತಾಸಕ್ತಿ ಸಂಘರ್ಷವಿಲ್ಲ. ಒಂಬುಡ್ಸಮೆನ್ ಗೆ ಯಾವುದೇ ಹಿತಾಸಕ್ತಿ ಸಂಘರ್ಷ ಕಾಣಿಸುತ್ತಿದ್ದರೆ ಆಗ ನಾವು ಅವರಿಗೆ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಥೋಡ್ಗೆ ತಿಳಿಸಿದರು.
ದ್ರಾವಿಡ್ ಆಯ್ಕೆಯಿಂದಾಗಿ ಹಿತಾಸಕ್ತಿ ಸಂಘರ್ಷ ಉಂಟಾಗುತ್ತದೆ ಎಂಧು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸದಸ್ಯ ಸಂಜಯ್ ಗುಪ್ತಾ ಅವರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್ ಜಾರಿ ಮಾಡಿತ್ತು.
ದ್ರಾವಿಡ್ ಅವರು ಎನ್ ಸಿಎ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರು ಇಂಡಿಯಾ ಸಿಮೆಂಟ್ ಗ್ರೂಪ್ ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡಿಯಾ ಸಿಮೆಂಟ್ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಂದಿದೆ.