ನವದೆಹಲಿ: ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 35 ವರ್ಷದ ಪಾರ್ಥಿವ್ ಪಟೇಲ್ ತಮ್ಮ 18 ವರ್ಷದ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದು ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಾರ್ಥಿವ್ ಪಟೇಲ್ 38 ಏಕದಿನ, 25 ಟೆಸ್ಟ್ ಪಂದ್ಯ, 2 ಟಿ-20 ಪಂದ್ಯಗಳಲ್ಲಿ ಭಾರತದ ಪರ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ 6, ಏಕದಿನದಲ್ಲಿ 4, ಐಪಿಎಲ್ ನಲ್ಲಿ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಂಡಿಯನ್ ಪ್ರೀಮಿಯ್ ಲೀಗ್ ನಲ್ಲಿ ಆಡಿರುವ ಪಾರ್ಥಿವ್ ಕೊನೆಯದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು.
ಪಾರ್ಥಿವ್ ತಮ್ಮ 17 ನೇ ವಯಸ್ಸಿನಲ್ಲೇ ಆಗಿನ ನಾಯಕ ಸೌರವ್ ಗಂಗೂಲಿ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿಯೇ ಸೌರವ್ ಗಂಗೂಲಿ ಅವರು ಪಾರ್ಥಿವ್ ಪಟೇಲ್ ಅವರನ್ನು ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಂಡರು.
2002ರಲ್ಲೆ ತಮ್ಮ ಟೆಸ್ಟ್ ಕ್ರಿಕೆಟ್ ಜರ್ನಿ ಆರಂಭಿಸಿದ ಪಾರ್ಥಿವ್ ಪಟೇಲ್ ‘ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್’ ಎಂಬ ದಾಖಲೆಯನ್ನು ಬರೆದಿದ್ದರು. ನಂತರ 2003 ಜೂನ್ 04ರಂದು ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
2003 ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ವಿಶ್ವಕಪ್ ಕ್ರಿಕೆಟ್ ಅನ್ನು ಆಡುವ ಸಲುವಾಗಿ ತಮ್ಮ ಹೈಸ್ಕೂಲ್ ಪರೀಕ್ಷೆಯನ್ನೇ ಬಿಟ್ಟು ದಕ್ಷಿಣ ಆಫ್ರಿಕಾದ ಕಡೆಗೆ ಮುಖ ಮಾಡಿದ್ದರು. ಆಸೀಸ್ ಪ್ರವಾಸದಲ್ಲಿದ್ದಾಗ ಬ್ರೆಟ್ ಲೀ ಯಂತಹ ಬೌನ್ಸರ್ ನನ್ನ ಸಮರ್ಥವಾಗಿ ಎದುರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದೇ ಸಮಯದಲ್ಲಿ ಟೀಮ್ ಇಂಡಿಯಾಗೆ ಮಹೇಂದ್ರಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಅವರಂತಹ ಅದ್ಭುತ ಕಲೆಯುಳ್ಳ ಕ್ರಿಕೆಟ್ ದಿಗ್ಗಜರು ವಿಕೇಟ್ ಕೀಪರ್ ಆಗಿ ಬಂದಿದ್ದರಿಂದ ಪಾರ್ಥಿವ್ ಪಟೇಲ್ ನಿಧಾನವಾಗಿ ಅವಕಾಶದಿಂದ ವಂಚಿತರಾದರು.
ತಮ್ಮ 18 ವರ್ಷದ ವೃತ್ತಿಜೀವನದಲ್ಲಿ ಪಾರ್ಥಿವ್ ಪಟೇಲ್ ಟೆಸ್ಟ್, ಏಕದಿನ, ಟಿ-20, ಐಪಿಎಲ್ ಕ್ರಿಕೆಟ್ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪಾರ್ಥಿವ್ ತಮ್ಮ ಕೊನೆಯ ಟೆಸ್ಟ್ ಅನ್ನು 2018 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ, ಕೊನೆಯ ಏಕದಿನ ಕ್ರಿಕೆಟ್ ನನ್ನ 2011 ರಲ್ಲಿ ಇಂಗ್ಲೆಂಡ್ ವಿರುದ್ಧ, ಟಿ-20ಯನ್ನ 2012 ರಲ್ಲಿ ಶ್ರೀಲಂಕದ ವಿರುದ್ಧ ಆಡಿದ್ದರು.
ಗುಜರಾತಿನ ಅಹಮದಾಬಾದ್ ನಲ್ಲಿ ಜನಿಸಿದ ಪಾರ್ಥಿವ್ ಪಟೇಲ್ ಇದೀಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.