ನಾಪೋಕ್ಲು : ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 7ನೇ ವರ್ಷದ ನಾಲ್ಕು ನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಮಾಜಿ ವಖ್ಫ್ ಬೋರ್ಡ್ ಅಧ್ಯಕ್ಷ ಎಂ. ಎಚ್. ಅಬ್ದುಲ್ ರೆಹ್ಮಾನ್, ಕೆಡಿಪಿ ಸದಸ್ಯ ಶಿವಚಾಳಿಯಂಡ ಅಂಬಿಕಾರ್ಯಪ್ಪ, ಜೆಡಿಎಸ್ ಮುಖಂಡ ಮನ್ಸೂರ್ ಆಲಿ, ಆರ್ ಟಿ ಐ ಕಾರ್ಯಕರ್ತ ಕೆ. ಎ. ಹಾರಿಸ್ ಜಂಟಿಯಾಗಿ ಚಾಲನೆ ನೀಡಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ವಖ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಒಬ್ಬ ಮನುಷ್ಯ ಆರೋಗ್ಯವಾಗಿರಲು ಕ್ರೀಡೆ ಬಹಳ ಮುಖ್ಯ. ನಮ್ಮದೇಶವಾಗಲಿ ಪ್ರಪಂಚದ ಯಾವುದೇ ಮೂಲೆಯಲ್ಲಾಗಲಿ ನಡೆಯುವ ಯಾವುದೇ ಕ್ರೀಡೆಯಲ್ಲಿ ಜಾತಿ,ಧರ್ಮ ಬೇದಭಾವ ಕಾಣಲು ಸಾಧ್ಯವಿಲ್ಲ, ಕ್ರೀಡೆಯಿಂದ ಭವ್ಯ ದೇಶ ಕಟ್ಟಲು ಸಾಧ್ಯ ಎಂದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಒಳ್ಳೆಯ ಕ್ರೀಡಾಪಟುವನ್ನು ನೀಡಲು ಸಾಧ್ಯ ಎಂದರು.
ಕೆಡಿಪಿ ಸದಸ್ಯ ಅಂಬಿಕಾರ್ಯಪ್ಪ ಮಾತನಾಡಿ ಗ್ರಾಮೀಣಮಟ್ಟದಲ್ಲಿ ಆಯೋಜಿಸುವಂತಹ ಕ್ರೀಡೆ ಬಹಳ ಮುಖ್ಯ. ಇದರಿಂದ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಕ್ರೀಡಪಟ್ಟುವನ್ನು ಆಯ್ಕೆ ಮಾಡಬಹುದು.ಟೆನ್ನಿಸ್ ಬಾಲ್ ಕ್ರಿಕೆಟ್ ಬಿಟ್ಟು ಮುಂದೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲು ಡೆಕ್ಕನ್ ಯೂತ್ ಕ್ಲಬ್ ನವರು ಮುಂದೆ ಬರಬೇಕು ಇದಕ್ಕೆ ನಾವೆಲ್ಲರೂ ಸಹಕಾರ ನೀಡಲಿದ್ದೇವೆ ಎಂದರು.ಟೆನ್ನಿಸ್ ಬಾಲ್ ಪಂದ್ಯಾಟ ಗ್ರಾಮೀಣ ಮಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಲೆದರ್ ಬಾಲ್ ಪಂದ್ಯಾವಳಿಯಿಂದ ದೇಶಕ್ಕೆ ಹಾಗೂ ರಾಜ್ಯಕ್ಕೆ ನಮ್ಮ ನಾಲ್ಕುನಾಡು ವಿಭಾಗದಿಂದ ಉತ್ತಮ ಆಟಗಾರರನ್ನು ನೀಡಲು ಸಾಧ್ಯವಾಗಲಿದೆ ಎಂದರು. ಯಾರು ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯ ಹಾಗೂ ಕುಟುಂಬವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್ಟಿಐ ಕಾರ್ಯಕರ್ತ ಹ್ಯಾರಿಸ್ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದುಷ್ಚಟಗಳಿಂದ ದೂರವಿರಲು ಸಾಧ್ಯ. ಅಲ್ಲದೆ ಉತ್ತಮ ಬಾಂಧವ್ಯದ ಜೊತೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಪ್ರಸ್ತಾವಿಕವಾಗಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಈ ಸಂದರ್ಭ ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಮನ್ಸೂರ್,ಪದಾಧಿಕಾರಿಗಳಾದ ಉಬೈದ್, ಸಂಶುದ್ದೀನ್, ಮಸೂದ್, ಶಾನಿದ್, ಅಬ್ದುಲ್ ಖಾದರ್, ನೌಫಲ್, ನೌಶಾದ್, ಜಾಫರ್,ಸೇರಿದಂತೆ ನಾಲ್ಕುನಾಡು ವಿಭಾಗದ ವಿವಿಧ ತಂಡದ ಸದಸ್ಯರುಗಳು ಮತ್ತಿತರರು ಹಾಜರಿದ್ದರು.