ಮುಂಬೈ: ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ಕ್ರಿಕೆಟರ್ ರಿಷಬ್ ಪಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದು, ನೀರಿನಲ್ಲಿ ವಾಕ್ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ.
ಪಂತ್ ಅವರು ಬುಧವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು ಕೋಲಿನ ಸಹಾಯದಿಂದ ಈಜುಕೊಳದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾರೆ.
ಅವರ ಮೊಣಕಾಲು ಅಥವಾ ಬಲ ಪಾದದ ಮೇಲೆ ಯಾವುದೇ ಬ್ಯಾಂಡೇಜ್ ಇರಲಿಲ್ಲ, ಇದು ಚೇತರಿಕೆಯ ಹಾದಿಯಲ್ಲಿ ಭಾರಿ ಸುಧಾರಣೆಯ ಸಂಕೇತವಾಗಿದೆ. “ಸಣ್ಣ ವಿಷಯಗಳು, ದೊಡ್ಡ ವಿಷಯಗಳು ಮತ್ತು ನಡುವೆ ಇರುವ ಎಲ್ಲದಕ್ಕೂ ಕೃತಜ್ಞರಾಗಿರುತ್ತೇನೆ” ಎಂದು ಪಂತ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕ್ರೀಡಾಪಟುಗಳಿಗೆ ಕೀಲುಗಳ ಗಾಯಗಳಿಂದ ಚೇತರಿಸಿಕೊಳ್ಳಲು ನೀರಿನ ವಾಕಿಂಗ್ ಸಹಾಯಕ. ನೀರಿನಲ್ಲಿ ನಡೆಯುವುದರಿಂದ ಹೃದಯರಕ್ತನಾಳದ ಫಿಟ್‌ನೆಸ್, ಸಮತೋಲನ, ಮತ್ತು ಸಂಪೂರ್ಣ ಫಿಟ್‌ನೆಸ್ ಪಡೆಯಲು ಸಹಾಯ ಮಾಡುತ್ತದೆ.
ಡಿಸೆಂಬರ್ 30ರಂದು, ಬೆಳಿಗ್ಗೆ 5:30 ರ ಸುಮಾರಿಗೆ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಾಗ ಪಂತ್ ಗಂಭೀರ ಗಾಯಗೊಂಡಿದ್ದರು.