ಏಷ್ಯನ್ ಫೆಸಿಫಿಕ್ ಯೂತ್ ಕ್ರೀಡಾಕೂಟಕ್ಕೆ ಮಂಡ್ಯದ ಮಾಧುರಿ ಆಯ್ಕೆ

ಏಷ್ಯನ್ ಫೆಸಿಫಿಕ್ ಯೂತ್ ಕ್ರೀಡಾಕೂಟಕ್ಕೆ ಮಂಡ್ಯದ ಮಾಧುರಿ ಆಯ್ಕೆ

LK   ¦    Sep 04, 2019 10:55:45 AM (IST)
ಏಷ್ಯನ್ ಫೆಸಿಫಿಕ್ ಯೂತ್ ಕ್ರೀಡಾಕೂಟಕ್ಕೆ ಮಂಡ್ಯದ ಮಾಧುರಿ ಆಯ್ಕೆ

ಮಂಡ್ಯ: ರಷ್ಯಾದ ವ್ಲಾಡೊವೋಸ್ಟಾಕ್‍ನಲ್ಲಿ ಸೆ.3ರಿಂದ 9ರವರೆಗೆ ನಡೆಯಲಿರುವ 10ನೇ ಏಷ್ಯನ್ ಫೆಸಿಫಿಕ್ ಯೂತ್ ಕ್ರೀಡಾಕೂಟದಲ್ಲಿ ಭಾರತೀಯ ತಂಡಕ್ಕೆ ಚೆಸ್‍ನ ಕೋಚ್ ಆಗಿ ಮಂಡ್ಯದ ಚೆಸ್ ಆಟಗಾರ್ತಿ ನಂದಿ ಪಾಟಿ ಮಾಧುರಿ ಜೈನ್ ಆಯ್ಕೆಯಾಗಿದ್ದಾರೆ.

ಸಣ್ಣ ವಯಸ್ಸಿನಿಂದಲೂ ಚೆಸ್ ಬೋರ್ಡ್, ಪಾನ್‍ಗಳ ಒಡನಾಟ ಬೆಳೆಸಿ ಕೊಂಡಿರುವ ಮಾಧುರಿ, ಮಂಡ್ಯ ನಗರ ದಲ್ಲಿ ಚೆಸ್ ಅಕಾಡೆಮಿ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ಚೆಸ್ ಆಟದ ಬೀಜ ಬಿತ್ತು ನೂರಾರು ವಿದ್ಯಾರ್ಥಿಗಳನ್ನು ಚಾಂಪಿಯನ್ನಾಗಿಸಿದ್ದಾರೆ. ಈಗಾಗಲೇ ಮಂಡ್ಯ ಚೆಸ್ ಅಕಾಡೆಮಿ ಮಕ್ಕಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಕಾಮನ್ ವೆಲ್ತ್, ಏಶಿಯನ್ ಹಾಗೂ ವಿಶ್ವ ಚೆಸ್‍ನಲ್ಲಿ ಆಡಿಧ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು 58 ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರನ್ನು ಅಕಾಡೆಮಿ ಹೊಂದಿದೆ.

ಶಾಲೆಯಲ್ಲಿ ಚೆಸ್ ಯೋಜನೆ ಅಡಿಯಲ್ಲಿ ತುಮಕೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸುಮಾರು ಎಂಟರಿಂದ ಹತ್ತು ಶಾಲೆಯಲ್ಲಿ ಚೆಸ್ ತರಬೇತಿ ನೀಡುತ್ತಿದ್ದಾರೆ. ಏಷ್ಯಾ ಯೂತ್ ಕ್ರೀಡಾಕೂಟದಲ್ಲಿ ಅರೆನಾ, ಪುಟ್ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್, ಈಜು, ಚೆಸ್ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದು, ಚೆಸ್ ಸ್ಪರ್ಧೆಯಲ್ಲಿ ಇಬ್ಬರು ಯುವಕರು, ಯುವತಿಯರು ಪಾಲ್ಗೊಳ್ಳಲಿದ್ದು, ಅವರಿಗೆ ತರಬೇತುದಾರರಾಗಿ ಮಾಧುರಿ ಜೈನ್ ಭಾಗವಹಿಸಲಿದ್ದಾರೆ.

2018ರಲ್ಲಿ ತುಮಕೂರಿನಲ್ಲಿ ನಡೆದ 32ನೇ ರಾಷ್ಟ್ರೀಯ 7 ವರ್ಷದೊಳಗಿನ ಮಕ್ಕಳ ಚೆಸ್ ಪಂದ್ಯಾವಳಿಯನ್ನು ಆಯೋಜನೆ ಮಾಡಿ, ಅದ್ದೂರಿಯಾಗಿ ಯಶಸ್ವಿಯಾಗಿ ಆಯೋಜಿಸಿದ ಕೀರ್ತಿಗೆ ಮಾಧುರಿಯವರಿಗಿದೆ. ಜಿಲ್ಲೆ, ರಾಜ್ಯ, ರಾಷ್ಟ್ರಿಯ ಹಾಗು ರೇಟಿಂಗ್ ಪಂದ್ಯಾವಳಿ ಸೇರಿದಂತೆ ಸುಮಾರು ಮೂನ್ನೂರಕ್ಕೂ ಹೆಚ್ಚು ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಮಾಧುರಿಯವರ ಈ ಸಾಧನೆಗಳನ್ನೆಲ್ಲ ಪರಿಗಣಿಸಿ ಅಖಿಲಾ ಭಾರತ ಚೆಸ್ ಸಂಸ್ಥೆ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಯುವ ಚೆಸ್ ತಂಡಕ್ಕೆ ಕೋಚ್ ಹಾಗಿ ನೇಮಿಸಿದೆ.

2019ರ ಫೆಬ್ರುವರಿ ತಿಂಗಳಿನಲ್ಲಿ ಚೆನ್ನೈನಲ್ಲಿ ವಿಶ್ವ ಚೆಸ್ ಸಂಸ್ಥೆ ಹಾಗೂ ಅಖಿಲಾ ಭಾರತ ಚೆಸ್ ಸಂಸ್ಥೆ ಆಯೋಜಿಸಿದ್ದ ಚೆಸ್ ತರಬೇತಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಚೆಸ್ ತರಬೇತಿ ನೀಡಲು ಚೆಸ್ ತರಬೇತಿ ಪ್ರಮಾಣ ಪತ್ರ ಪಡೆದ ರಾಜ್ಯದ ಮೊದಲ ಆಟಗಾರ್ತಿಯಾಗಿ ಮಾನ್ಯತೆ ಪಡೆದಿದ್ದಾರೆ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳಲ್ಲಿ ಭಾಗ ವಹಿಸಲಿದ್ದಾರೆ. 2008ರಲ್ಲಿ ನಾಗಪುರ ದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಚೆಸ್ ಆಟಗಾರ್ತಿಯಾಗಿ ಮೊದಲ ಬಾರಿಗೆ ಆಟ ಆಡಿದ್ದ ಮಾಧುರಿ ಜೈನ್ ಅವರು ಒಂದು ಅಂಕದ ಅಂತರದಿಂದ ಬಹುಮಾನ ವಂಚಿತರಾಗಿದ್ದರು.

ಶ್ರೀಲಂಕಾದಲ್ಲಿ ನಡೆದ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಕಂಚಿನ ಪದಕ, ದುಬೈನಲ್ಲಿ ನಡೆದ ಗ್ರ್ಯಾಂಡ್ ಮಾಸ್ಟರ್ ಪಂದ್ಯ, ಹೈದರಾಬಾದ್ನಲ್ಲಿ ನಡೆದ ಒಎನ್‍ಜಿಸಿ ಅಂತರಾಷ್ಟ್ರೀಯ ಟೂರ್ನಮೆಂಟ್, ದೆಹಲಿಯಲ್ಲಿ ನಡೆದ ಪಾಶ್ರ್ವನಾಥ ಇಂಟರ್ ನ್ಯಾಷನಲ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದಾರೆ. ರಾಜ್ಯ, ರೇಟಿಂಗ್ ಪಂದ್ಯಾವಳಿಗಳು ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಟೂರ್ನಿಗಳಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಮಕ್ಕಳ ಶಾಲೆಯ 20 ಮಕ್ಕಳಿಗೆ ಉಚಿತ ವಾಗಿ ಚೆಸ್ ತರಬೇತಿ ನೀಡುತ್ತಿದ್ದಾರೆ. ಇವರ ಶಿಷ್ಯೆ 9 ವರ್ಷದ ಸುನಿಧಿ ರಾಷ್ಟ್ರೀಯ ಮಟ್ಟದ ಅಂಧ ಮಕ್ಕಳ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ಮನೆ ಚದುರಂಗ ನಿಲಯವು ಚೆಸ್ ಪುಸ್ತಕಗಳು, ಟ್ರೋಫಿಗಳಿಂದ ತುಂಬಿದ್ದು ಹಲವು ವಿಶೇಷತೆಗಳಿಂದ ಕೂಡಿದೆ. ಅಲ್ಲದೇ 450ಕ್ಕೂ ಹೆಚ್ಚು ಚೆಸ್ ಸಂಬಂಧಿ ಪುಸ್ತಕ ಸಂಗ್ರಹಿಸಿದ್ದಾರೆ. ಅವರು ನಡೆಸುವ ಮಂಡ್ಯ ಚೆಸ್ ಅಕಾಡೆಮಿಯಲ್ಲೂ ಲಕ್ಷಾಂತರ ಚೆಸ್ ತಂತ್ರಾಂಶದ ಒಳಗೊಂಡು ಪ್ರಾಜೆಕ್ಟರ್ ಮೂಲಕ ತರಬೇತಿ ನೀಡುತ್ತಾರೆ.

ತಾಳ್ಮೆ ಇದ್ದರೆ ಬುದ್ಧಿವಂತಿಕೆ ತಾನಾಗಿಯೇ ಒಲಿದು ಬರುತ್ತದೆ. ಚೆಸ್ ಬರೀ ಆಟವಲ್ಲ, ಇದು ಜೀವನ ಮೌಲ್ಯಗಳ ಪಾಠ ಕಲಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಚೆಸ್ ಕಲಿಯುವ ಮಕ್ಕಳನ್ನು ಚುರುಕು ಮಾಡುತ್ತದೆ. ಪರೋಕ್ಷವಾಗಿ ಬದುಕಿನ ದಾರಿ ತೋರಿಸುತ್ತದೆ. ಯಾವುದೇ ವಿದ್ಯೆಯಲ್ಲಿ ನಿರಂತರ ಪರಿಶ್ರಮ, ಕಲಿಯುವಿಕೆ, ಆಸಕ್ತಿ ಇದ್ದಲ್ಲಿ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಚೆಸ್ ಕೋಚ್ ಮಾಧುರಿ ಜೈನ್ ಅಭಿಪ್ರಾಯಪಟ್ಟಿದ್ದಾರೆ.