ಬಿಹಾರ: ಸಿಕ್ಖರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಾಚಿಕೆಪಟ್ಟು ತಲೆತಗ್ಗಿಸಿ ನಿಲ್ಲಬೇಕು. ಅದು ಬಿಟ್ಟು ಎನ್‌ಡಿಎ ಸರಕಾರಕ್ಕೆ ಉಪದೇಶ ನೀಡುವ ನಾಟಕವಾಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ಧಾಳಿ ನಡೆಸಿದ್ದಾರೆ.
ಅವರು ನ. 5ರಂದು ಕೊನೆಯ ಹಂತದಲ್ಲಿ ಚುನಾವಣೆ ಎದುರಿಸಲಿರುವ, ಮುಸ್ಲಿಮರು ಪ್ರಬಲವಾಗಿರುವ ಸೀಮಾಂಚಲದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಸೋಮವಾರ ಮಾತನಾಡಿದರು. ಇಂದಿರಾ ಗಾಂಧಿ ಹತ್ಯೆಯಾದ ಎರಡು, ಮೂರು, ನಾಲ್ಕನೇ ದಿನ ದಿಲ್ಲಿ ಹಾಗೂ ದೇಶಾದ್ಯಂತ ಸಿಕ್ಖರ ನರಮೇಧ ನಡೆಸಲಾಯಿತು. ಇದರಲ್ಲಿ ಕಾಂಗ್ರೆಸ್ ಹಾಗೂ ಅದರ ನಾಯಕರು ಭಾಗವಹಿಸಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ ಇದೇ ದಿನ ಕಾಂಗ್ರೆಸ್ ಪಕ್ಷ ನಮಗೆ ಸಹಿಷ್ಣುತೆಯ ಪಾಠ ಮಾಡುತ್ತಿದೆ. ನಾಚಿಕೆಯಲ್ಲಿ ಆ ಪಕ್ಷ ಮುಳುಗಬೇಕು ಎಂದು ಕಿಡಿಕಾರಿದರು. ಬಿಹಾರದಲ್ಲಿ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ. ಆದರೂ ಆ ಪಕ್ಷಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು 40 ಸ್ಥಾನ ನೀಡಿದ್ದಾರೆ. ಆ ಸೀಟುಗಳೆಲ್ಲಾ ಬಿಜೆಪಿಗೆ ನಿರಾಯಾಸವಾಗಿ ಸಿಗುತ್ತವೆ.