ಹೊಸದಿಲ್ಲಿ: 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಆತ ಬಂಧಮುಕ್ತಗೊಳ್ಳದಂತೆ ತಡೆಯಲು ಸಂತ್ರಸ್ತೆಯ ಪಾಲಕರು ನಡೆಸಿದ ಅವಿರತ ಹೋರಾಟ ವಿಫಲವಾಗಿದೆ.
3 ವರ್ಷ ಸಜೆ ಪೂರೈಸಿದ ಬಳಿಕ ಬಾಲಾಪರಾಧಿಯನ್ನು ರಹಸ್ಯ ಸ್ಥಳದಿಂದ ರವಿವಾರ ಸಂಜೆ ಬಿಡುಗಡೆ ಮಾಡಲಾಗಿದ್ದು, ಆ ಬಳಿಕ ಸರಕಾರೇತರ ಸಂಘಟನೆಯೊಂದು ಆತನನ್ನು ಸುಪರ್ದಿಗೆ ತೆಗೆದುಕೊಂಡು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದಿದೆ. ಬಿಡುಗಡೆಗೂ ಮುನ್ನ ಬಾಲಾಪರಾಧಿಯನ್ನು ನೀನು ಉತ್ತರಪ್ರದೇಶದ ಬದಾಯೂಂನಲ್ಲಿರುವ ನಿನ್ನ ಮನೆಗೆ ಹೋಗುತ್ತೀಯಾ ಅಥವಾ ಸರಕಾರೇತರ ಸಂಘಟನೆಯ ಆಶ್ರಯದಲ್ಲಿ ಇರುತ್ತೀಯಾ ಎಂದು ಪ್ರಶ್ನಿಸಲಾಯಿತು. ಆಗ ಆತ ನಾನು ಮನೆಗೆ ಹೋಗಲ್ಲ. ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಯ ಆಶ್ರಯದಲ್ಲೇ ಇರುವೆ ಎಂದ. ಹೀಗಾಗಿ ಆತನನ್ನು ಸಂಸ್ಥೆಯ ವಶಕ್ಕೆ ಒಪ್ಪಿಸಲಾಗಿದೆ.
ವಿಚಾರಣೆ ಸಂದರ್ಭ ಹೈಕೋರ್ಟ್ ಆದೇಶದ ವಿರುದ್ಧ ಮಹಿಳಾ ಆಯೋಗ ಪರ ಹಿರಿಯ ವಕೀಲರಾದ ಗುರು ಕೃಷ್ಣ ಕುಮಾರ್ ಮತ್ತು ದೇವದತ್ತ ಕಾಮತ್ ಅವರು ಹಾಜರಾಗಿದ್ದು ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ತಡೆಕೊಡಬೇಕೆಂದು ಕೋರಿಕೊಂಡರು. ಬಾಲಾಪರಾಧಿ ಜೈಲಿನಲ್ಲಿ ಮತ್ತಷ್ಟು ಬ್ರೈನ್ವಾಶ್ಗೆ ಒಳಗಾಗಿದ್ದಾನೆ ಎಂಬ ಗುಪ್ತಚರ ಮಾಹಿತಿಗಳಿವೆ. ಆದ್ದರಿಂದ ಆತನ ಬಿಡುಗಡೆ ಸಮಾಜಕ್ಕೆ ಅಪಾಯಕಾರಿ ಎಂದು ವಾದಿಸಿದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಈ ಸಂದರ್ಭದಲ್ಲಿ ಆತ ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿ ವಿಚಾರಣೆ ಮುಂದೂಡಿತು.
ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ತರಲು ದೆಹಲಿ ಮಹಿಳಾ ಆಯೋಗ ಶನಿವಾರ ನಡುರಾತ್ರಿ ನಡೆಸಿದ್ದ ಹೋರಾಟ ವಿಫಲವಾಗಿದೆ. ಆಯೋಗ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ಮಾಡಲು ಸುಪ್ರಿಂಕೋರ್ಟ್ ನಿರಾಕರಿಸಿದ್ದು, ಸೋಮವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.