ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್ ಗಾಂಧಿ ಪ್ರಥಮ ಬಾರಿಗೆ ಪಕ್ಷದ ಸಂಸದೀಯ ಸಭೆಯ ನೇತೃತ್ವ ವಹಿಸಿ, ನೋಟ್ ಬದಲಾವಣೆಯಿಂದ ಶ್ರೀಸಾಮಾನ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆಲ್ಲಾ ಪ್ರಧಾನಿ ಮೋದಿಯೇ ಕಾರಣವೆಂದರು.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದ ಕಾರಣ ಸಭೆಯ ಮುಂದಾಳತ್ವ ವಹಿಸಿ ಮಾತನಾಡಿದ ರಾಹುಲ್, ಮೋದಿ ತಮ್ಮ ಟಿಆರ್ಪಿ ರಾಜಕೀಯಕ್ಕಾಗಿ ಸಾಮಾನ್ಯ ಜನರು ಪ್ರತಿದಿನ ಸಂಕಷ್ಟ ಎದುರಿಸುವಂತೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮೋದಿಯ ಪ್ರತಿಷ್ಠೆ ಹಾಗೂ ಅದಕ್ಷತೆಯಿಂದ ದೇಶದ ಜನ ಪರದಾಡುವಂತಾಗಿದದ್ದು, ಕಾಂಗ್ರೆಸ್ ಯಾವತ್ತೂ ಈ ರೀತಿಯ ಪ್ರಧಾನಿಯನ್ನು ದೇಶಕ್ಕೆ ನೀಡಿಲ್ಲ, ಮೋದಿಗೆ ಟಿ ಆರ್ ಪಿ ಪಾಲಿಟಿಕ್ಸ್ನಲ್ಲಿ ಆಸಕ್ತಿಯಿದೆ ಎಂದು ಆರೋಪಿಸಿದರು.
ಮೋದಿ ವಿರುದ್ಧ ನೋಟ್ ಬ್ಯಾನ್ ನಿರ್ಧಾರದ ಬಳಿಕ ರಾಹುಲ್ ತಮ್ಮ ಅಸಮಾಧಾನವನ್ನು ತೋರಿಸುತ್ತಲೇ ಬರುತ್ತಿದ್ದು, ಇಂದಿನ ಕಾಂಗ್ರೆಸ್ ಸಂಸದೀಯ ಸಭೆಯಲ್ಲೂ ಇದು ಮುಂದುವರಿದಿದೆ.
ಕಾಶ್ಮೀರ ಹೊತ್ತಿ ಉರಿಯುವಾಗ ಮೋದಿ ಮೌನವಾಗಿರುತ್ತಾರೆ. ನೋಟ್ ಬ್ಯಾನ್ ಮಾಡುವಾಗ ನಂತರ ಆಗಬಹುದಾದ ಸಮಸ್ಯೆಯ ಬಗ್ಗೆ ವಿಚಾರಿಸದೆ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಹುಲ್ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.