ಚೆನ್ನೈ: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇಂದು ಇಹಲೋಕ ತ್ಯಜಿಸಿದರು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಸೆಪ್ಟೆಂಬರ್ 22ರಿಂದ ಜಯಾಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಭಾನುವಾರ ಸಂಜೆ ಜಯಾಗೆ ಹೃದಯಾಘಾತವಾಗಿತ್ತು. ಜೀವನ್ಮರಣ ಹೋರಾಟ ಸ್ಥಿತಿಯಲ್ಲಿದ್ದ ಜಯಾಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಜಯಾ ಅವರಿಗೆ 72 ದಿನಗಳ ನಂತರ ಯಾವ ಕ್ಷಣದಲ್ಲೂ ಏನು ಬೇಕಾದರೂ ಸಂಭವಿಸಬಹುದು ಎಂದು ಲಂಡನ್ನಿಂದ ಆಗಮಿಸಿದ್ದ ತಜ್ಞ ವೈದ್ಯ ರಿಚರ್ಡ್ ಬೀಲೆ ಎಚ್ಚರಿಕೆ ನೀಡಿದ್ದರು.
ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆಯೇ ಚೆನ್ನೈನ ಆಪೋಲೋ ಆಸ್ಪತ್ರ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ಧಾವಿಸುತ್ತಿರುವ ಕಾರಣ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಜಯಲಲಿತಾಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆಯೇ ನಿನ್ನೆ ರಾತ್ರಿಯಿಂದ ಅಪೋಲೋ ಆಸ್ಪತ್ರೆ ಸುತ್ತಲೂ ಸಾವಿರಾರು ಅಭಿಮಾನಿಗಳು ಆಗಮಿಸುತ್ತಿದ್ದು, ಅವರಿಗೆ ನಿಯಂತ್ರಿಸಲು ಸುಮಾರು 500ಕ್ಕೂ ಅಧಿಕ ಪೊಲೀಸರಿಗೆ ನಿಯೋಜಿಸಲಾಗಿದೆ. ಅಪೋಲೋ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೇ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸುಮಾರು 800 ಮೀಟರ್ ದೂರದಿಂದಲೇ ಬ್ಯಾರಿಕೇಡ್ ಗಳನ್ನು ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿದೆ.
ಇಂದು ಬೆಳಗ್ಗೆ ಅವರಿಗೆ ಆ್ಯಂಜಿಯೋಗ್ರಫಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶ್ವಾಸಕೋಶಕ್ಕೆ ಮತ್ತೆ ರಕ್ತಪರಿಚಲನೆಯಾಗುವಂತೆ ಮಾಡಲಾಗಿದೆ. ಅಲ್ಲದೆ ಜಯಾ ಅವರಿಗೆ ಇಸಿಎಂಒ ಉಪಕರಣವನ್ನು ಅಳವಡಿಸಲಾಗಿದ್ದು, ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಉಪಕರಣದ ಮೂಲಕ ನೀಡಿತ್ತದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಜಯಲಲಿತಾ ನಡೆದು ಬಂದ ಹಾದಿ
1948ರ ಫೆಬ್ರುವರಿ 24ರಂದು ಮೇಲುಕೋಟೆಯ ಜಯರಾಮನ್, ಸಂಧ್ಯಾ ದಂಪತಿಗೆ ಜನಿಸಿದ ಜೆ. ಜಯಲಲಿತಾ ಹುಟ್ಟು ಹೆಸರು ಕೋಮಲವಲ್ಲಿ. ತಾತ (ತಂದೆಯ ತಂದೆ) ಮೈಸೂರು ಒಡೆಯರ್ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ ಮಾಡಲಾಗಿತ್ತು. ಸತತ ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಹುಟ್ಟಿದ್ದು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯ ಸಮುಚ್ಚಯದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ.
ಜಯಲಲಿತಾ ಅವರ ತಂದೆ ಜಯರಾಂ ಅವರು 1952ರಲ್ಲಿ ನಿಧನ ಹೊಂದಿದರು. ಆಗ ಜಯಲಲಿತಾ ಅವರಿಗೆ ಕೇವಲ 4 ವರ್ಷ. ನಂತರ ಜಯಲಲಿತಾ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ನೆಲೆಸುತ್ತದೆ. ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದರು. ಆ ಸಮಯದಲ್ಲಿ ಇವರ ತಾಯಿ ಸಂಧ್ಯಾ ಅವರ ಸೋದರಿ ವಿದ್ಯಾ ಅಥವಾ ಅಂಬುಜಾ ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು.
ಸಂಸಾರದ ನೊಗ ಹೊತ್ತಿದ್ದ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು, ಜಯರಾಮ್ ನಿಧನದ ಬಳಿಕ ತಮ್ಮ ಸಹೋದರಿಯ ನೆರವಿನೊಂದಿಗೆ ಚೆನ್ನೈ ಸೇರಿಕೊಂಡಿದ್ದರು. ಸಂಧ್ಯಾ ಅವರು ಕೂಡ ನಟಿಯಾಗಿದ್ದು, ಚೆನ್ನೈನಲ್ಲಿ ಹಲವು ನಾಟಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಅದರಿಂದ ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು. ಜಯಾ ಕೂಡ ತಮ್ಮ ತಾಯಿಯೊಂದಿಗೆ ಶೂಟಿಂಗ್ ಗೆ ತೆರಳುತ್ತಿದ್ದರು.ತಾಯಿ ನಟನೆಯನ್ನು ನೋಡಿ ಸ್ಫೂರ್ತಿಗೊಂಡಿದ್ದರು. ಆ ಮೂಲಕ ಸಿನಿಮಾರಂಗಕ್ಕೆ ಜಯಾ ಹತ್ತಿರವಾಗಿದ್ದರು. ಮೈಸೂರಿನಲ್ಲಿದ್ದ ಆಸ್ತಿಪಾಸ್ತಿಯನ್ನು ಮಾರಾಟ ಮಾಡಿದರು. ಮೈಸೂರಿನ ಲಕ್ಷ್ಮಿಪುರಂನ ಎರಡನೇ ಮೇನ್ನಲ್ಲಿದ್ದ ಲಲಿತಾ ವಿಲಾಸ, ರಾಮವಿಲಾಸ ಮನೆಗಳು ಹಾಗೂ ಸರಸ್ವತಿಪುರಂನ ಮೊದಲನೇ ಮೇನ್ನ 3ನೇ ಕ್ರಾಸ್ನಲ್ಲಿರುವ ಮನೆಯನ್ನು ಜಯವಿಲಾಸ್ ಎಂದು ಕರೆಯುತ್ತಿದ್ದರು. ಇದನ್ನು ಜಯಲಲಿತಾರಿಗೆಂದೇ ಖರೀದಿಸಿದ್ದರು. ಇದನ್ನು ಮಾರಾಟ ಮಾಡಿದ್ದರು. ಹೀಗಾಗಿ, ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು.
ಸಿನಿಮಾ ಮತ್ತು ರಾಜಕೀಯ ಎರಡು ಭಿನ್ನ ಕ್ಷೇತ್ರಗಳು. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಪಾದಾರ್ಪಣೆ ಮಾಡಿ ಅಭೂತಪೂರ್ವ ವಿಜಯ ಸಾಧಿಸಿದ ದಿಟ್ಟ ಮಹಿಳೆ ಜಯಲಲಿತಾ. ತಮ್ಮ ಯೌವ್ವನದಲ್ಲಿ ಸಿನಿಮಾ ನಟಿಯಾಗಿ ಸಿನಿ ಅಭಿಮಾನಿಗಳ ರಂಜಿಸಿದ ಜಯಲಲಿತಾ, ಮಧ್ಯವಯಸ್ಸಿನಲ್ಲಿ ಪ್ರಜಾಪ್ರತಿನಿಧಿಯಾಗಿ ಒಂದು ರಾಜ್ಯದ ಜನತೆ ಅಮ್ಮಾ ಎಂದು ಕರೆಯುವಷ್ಟರಮಟ್ಟಿಗೆ ರಾಜಕೀಯವಾಗಿ ಬೆಳೆದು ನಿಂತರು. ವಿವಾದ, ಭ್ರಷ್ಟಾಚಾರ ಆರೋಪ ಮತ್ತು ಹಲವು ಅವಮಾನಗಳು ಎದುರಾದರೂ ಅವುಗಳನ್ನು ಏಕಾಂಗಿಯಾಗಿಯೇ ಎದುರಿಸಿ ಜಯಶೀಲರಾಗಿ ಮತ್ತೆ ರಾಜಕೀಯದಲ್ಲಿ ಯಶಸ್ಸು ಸಾಧಿಸಿದ್ದ ಧೀರ ಮಹಿಳೆ ಜಯಲಲಿತಾ.
1961ರಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ಜಯಾ ಶ್ರೀಶೈಲ ಮಹಾತ್ಮೆ ಎಂಬ ಕನ್ನಡ ಚಿತ್ರದಲ್ಲಿ ಪಾರ್ವತಿ ದೇವಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ತಮ್ಮ 15ನೇ ವಯಸ್ಸಿನಲ್ಲಿ 1964ರಲ್ಲಿ ಚಿನ್ನದ ಗೊಂಬೆ ಎಂಬ ಚಿತ್ರದ ಮೂಲಕ ನಾಯಕ ನಟಿಯಾಗಿ ಜಯಾ ಭಡ್ತಿ ಪಡೆದರು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಅಂದು ಜಯಾ ಪಡೆದಿದ್ದು 3ಸಾವಿರ ರು ಸಂಭಾವನೆ. ಬಳಿಕ ಹಿಂದೆ ತಿರುಗಿ ನೋಡದ ಜಯ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತಾರೆಯಾಗಿ ಬೆಳೆದರು. ಮನಸುಮಮತಾ ಎಂಬ ಚಿತ್ರದ ಮೂಲಕ ತೆಲುಗುಚಿತ್ರರಂಗ ಪ್ವೇಶಿಸಿದ ಜಯಾ, ಅಂದಿನ ಸೂಪರ್ ಸ್ಟಾರ್ ನಾಗೇಶ್ವರರಾವ್ ಅವರೊಂದಿಗೆ ನಟಿಸಿದ್ದರು. ಈ ಚಿತ್ರದ ಬಳಿಕ ತೆಲುಗಿನಲ್ಲೂ ತಮ್ಮ ಛಾಪು ಮೂಡಿಸಿದಜಯಾ ಅಂದಿನ ಕಾಲದ ಸೂಪರ್ ಸ್ಟಾರ್ ಗಳಾದ ಎನ್ ಟಿಆರ್, ಕೃಷ್ಣ, ಶೋಭನ್ ಬಾಬು ಅವರೊಂದಿಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರು.
ಬಹುಮುಖ ಪ್ರತಿಭೆಯಾಗಿದ್ದ ಜಯಾ ಕೇವಲ ನಟನೆ ಮತ್ತು ನೃತ್ಯ ಮಾತ್ರವಲ್ಲ. ಹಾಡುಗಾರಿಕೆಯಲ್ಲೂ ಮಿಂಚಿದ್ದರು. ತಮ್ಮ ಹಲವು ಚಿತ್ರಗಳಲ್ಲಿ ಹಿನ್ನಲೆಗಾಯನ ನೀಡಿದ್ದ ಜಯಾ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಹಾಡಿದ್ದರು. ಎಂಜಿಆರ್ ಜೊತೆ ಜಯಾ ಮೊದಲ ಚಿತ್ರದಲ್ಲಿ ನಟಿಸುವಾಗ ಅವರಿಗೆ ಕೇವಲ 17 ವರ್ಷ ವಯಸ್ಸಂತೆ. ಎಂಜಿಆರ್ ಗೆ ಅಂದು 48 ವರ್ಷ ವಯಸ್ಸು. ಈ ಭಾರಿ ವಯಸ್ಸಿನ ಅಂತರದ ನಡುವೆಯೂ ಈ ಜೋಡಿ ತಮಿಳುನಾಡಿನಲ್ಲಿ ಮೋಡಿ ಮಾಡಿತ್ತು. ಈ ಜೋಡಿ ಅಭಿನಯಿಸಿದ್ದ 28 ಚಿತ್ರಗಳ ಪೈಕಿ 24 ಚಿತ್ರಗಳು ಬ್ಲಾಕ್ ಬಸ್ಟರ್ ಆಗಿದ್ದವು. ಇದು ಈ ಜೋಡಿ ಯಶಸ್ಸಿಗೆ ಹಿಡಿದ ಕೈಗನ್ನಡಿ.
ಜೆ.ಜಯಲಲಿತಾ ಅವರು ಮೂಲತ ಕನ್ನಡದವರಾದರೂ ಕೋಟ್ಯಂತರ ತಮಿಳರ ಹೃದಯಗಳಲ್ಲಿ ಪ್ರೀತಿಯ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆಯ ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ)ಯಾಗಿ ಸ್ಥಾನ ಪಡೆದಿದ್ದರು. ಈ ಮಟ್ಟದ ನಾಯಕಿಯಾಗಿ ಬೆಳೆದ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರೇಮ, ವಿರಹ, ಅವಮಾನ, ನಿರಾಸೆ, ಹತಾಶೆ, ಹೋರಾಟ, ಸೇಡು ಎಲ್ಲವೂ ಈ ಮಾರ್ಗದಲ್ಲಿದ್ದವು.