ನವದೆಹಲಿ: ನೋಟು ನಿಷೇಧದ ಬಳಿಕ ದೇಶಾದ್ಯಂತ ಐಟಿ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಗಳಲ್ಲಿ ಒಟ್ಟು 2600 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದಾಗಿನಿಂದಲೂ ಈವರೆಗೂ ಸುಮಾರು 2600 ಕೋಟಿ ರು. ಕಪ್ಪುಹಣ ಪತ್ತೆಯಾಗಿದೆ. ಈ ಪೈಕಿ ಸುಮಾರು 393 ಕೋಟಿ ಹಣವನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 300 ಪ್ರಕರಣಗಳನ್ನು ದಾಖಲಿಸಲಾಗಿದೆ.
ನೋಟು ನಿಷೇಧದ ಬಳಿಕ ಈ ವರೆಗೂ ಒಟ್ಟು 291 ಪ್ರಕರಣಗಳಲ್ಲಿ ಶೋಧ ಮತ್ತು ಹಣ ಜಪ್ತಿ ಮಾಡಲಾಗಿದೆ. ಅಂತೆಯೇ 295 ಪ್ರಕರಣಗಳನ್ನು ವೀಕ್ಷಣೆಯಲ್ಲಿಡಲಾಗಿದೆ. ಅಂತೆಯೇ ಸುಮಾರು 316 ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದ್ದು, ಈ ಪೈಕಿ 80 ಕೋಟಿ ಹೊಸ ನೋಟುಗಳದ್ದಾಗಿದೆ. ಇದಲ್ಲದೆ ಸುಮಾರು 76 ಕೋಟಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.