ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ವಲಯದಲ್ಲಿ ನಡೆದ ಹಿಮಪಾತದಿಂದಾಗಿ ಹುತಾತ್ಮರಾದ ಯೊಧರ ಸಂಖ್ಯೆ 14ಕ್ಕೆ ಏರಿದ್ದು, ಈ ಪೈಕಿ ಹಾಸನ ಜಿಲ್ಲೆಯ ಶಾಂತಿಗ್ರಾಮದ ಹೋಬಳಿಯ ದೇವಿಹಳ್ಳಿಯ ವೀರ ಯೋಧ ಸಂದೀಪ್ ಶೆಟ್ಟಿ ಒಬ್ಬರಾಗಿದ್ದಾರೆ.
ಸಂದೀಪ್ ಅವರಿಗೆ 2 ತಿಂಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಮೊನ್ನೆ 25ರಂದು ಹಿಮಪಾತವಾಗುವುದಕ್ಕೆ ಕೆಲ ದಿನಗಳ ಹಿಂದೆ ಮನೆಯವರಿಗೆ ಕರೆ ಮಾಡಿ ಅಲ್ಲಿನ ದಟ್ಟ ಹಿಮ ಆವರಿಸಿದ ಬಗ್ಗೆ ತಿಳಿಸಿದ್ದರು. ಅವರ ಮದುವೆ ಫೆ.22 ರಂದು ನಡೆಯಬೇಕಿತ್ತು. ಇದೀಗ ಅವರ ವೀರ ಮರಣದಿಂದಾಗಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಅವರು 7-8 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು.
ಸಂದೀಪ್ ಹುತಾತ್ಮರಾದ ಬಗ್ಗೆ ಜಿಲ್ಲಾಡಳಿತಕ್ಕೆ ಇದುವರೆಗೆ ಮಾಹಿತಿ ಬಂದಿಲ್ಲ. ಗ್ರಾಮಸ್ಥರಿಂದ ವಿಷಯ ತಿಳಿದಿದೆ. ಇನ್ನೊಬ್ಬ ಯೋಧ ಬೆಳಗಾವಿಯ ಶ್ರೀಹರಿ ಕೂಗಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಅಲ್ಲಿ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ.