ಗುವಾಹಟಿ: ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ನೀಡಲಾಗಿದ್ದ ಶೇ.33 ರಷ್ಟು ಮೀಸಲಾತಿಗೆ ವಿರೋಧಿಸಿ ನಾಗಾಲ್ಯಾಂಡ್ ನಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ.
ಪುರಸಭೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವುದಕ್ಕೆ ನಾಗಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸಂಪ್ರದಾಯದಂತೆ ಚುನಾವಣೆಯನ್ನು ನಡೆಸುವಂತೆ ಆಗ್ರಹಿಸಿದ್ದವು. ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಮಂಗಳವಾರ ಪೊಲೀಸರು ಗುಂಡು ಹಾರಿಸಿದ್ದರು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದರು. ಇದೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾಯಿತು. ಕೊಹಿಮಾದಲ್ಲಿದ್ದ ಹಲವು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನಲೆಯಲ್ಲಿ ಹಿಂಸಾಚಾರ ನಿಯಂತ್ರಿಸುವ ಸಲುವಾಗಿ ಸೇನೆಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವೆಡೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗಾಲ್ಯಾಂಡ್ ರಾಜ್ಯದ ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಅಬಕಾರಿ ಇಲಾಖೆ ಕಚೇರಿಗಳೆ ಬೆಂಕಿ ಹಚ್ಚಿರುವ ಪ್ರತಿಭಟನಾಕಾರರು ಅಲ್ಲಿನ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಹಾಗೂ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.