ಮೆಲ್ಬೋರ್ನ್: ವ್ಯಕ್ತಿಯೊಬ್ಬ ರಾತ್ರೋರಾತ್ರಿ ಬಹುಕೋಟಿಗಳ ಒಡೆಯನಾದ ಕುತೂಹಲಕಾರಿ ಘಟನೆ ಪಶ್ಚಿಮ ಮೆಲ್ಬೋರ್ನ್ ಪಾಯಿಂಟ್ ಕೂಕ್ ಪ್ರದೇಶದಲ್ಲಿ ನಡೆದಿದೆ.
ಎರಡು ಲಾಟರಿಗಳಲ್ಲಿ ಒಂದೇ ದಿನ ಬಹುಮಾನ ಗಳಿಸಿದ್ದೇ ಆತ ಕೋಟ್ಯಾಧಿಪತಿ ಆಗಲು ಕಾರಣವಾಗಿದೆ. ಟ್ಯಾಟ್ಸ್ಲೊಟ್ಟೋ ಡ್ರಾ ಎಂಬ ಲಾಟರಿ ಕ್ಲಬ್ ಗೆ ಆಕಸ್ಮಿಕವಾಗಿ ಫೆ. 4 ರಂದು ಎರಡು ಬಾರಿ ಹೋಗಿದ್ದು, ಕ್ಲಬ್ ಒಳಗಡೆ ಎರಡು ಬಾರಿಯೂ ಒಂದೇ ನಂಬರಿನ ಲಾಟರಿ ಹಿಡಿದುಕೊಂಡು ಹೋಗಿದ್ದಾನೆ. ಎರಡೂ ಲಾಟರಿಗಳ ಲಕ್ಕಿ ಡ್ರಾನಲ್ಲಿ ವ್ಯಕ್ತಿ ಜಯಿಸಿ, 20 ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾನೆ.
10 ಲಕ್ಷ ಅಮೆರಿಕನ್ ಡಾಲರ್ ನನಗೆ ಮೊದಲನೇ ಡ್ರಾನಲ್ಲಿ ಸಿಕ್ಕಿದ್ದು ಬಹಳ ಖುಷಿಯಾಯಿತು. ಇದನ್ನು ನಂಬಲು ನನಗೆ ಸಾಧ್ಯವಾಗಲಿಲ್ಲ. ಆದರೆ ಎರಡನೇ ಬಾರಿಯ ಡ್ರಾನಲ್ಲೂ ನನಗೆ 10 ಲಕ್ಷ ಸಿಕ್ಕಿರುವುದು ಅತೀವ ಸಂತೋಷವಾಗಿದೆ ಎಂದಿದ್ದಾನೆ ಬಹುಮಾನ ಗೆದ್ದ ವ್ಯಕ್ತಿ.
ಮಾತ್ರವಲ್ಲ ಬಹುಮಾನವಾಗಿ ಸಿಕ್ಕಿರುವ 20 ಲಕ್ಷ ಅಮೆರಿಕನ್ ಡಾಲರ್ಗೆ ಯಾವುದೇ ರೀತಿಯ ತೆರಿಗೆ ಇಲ್ಲ. ಈ ಹಣದಲ್ಲಿ ಒಂದು ಮನೆ, ಒಂದು ಫೆರಾರಿ ಕಾರು ಖರೀದಿಸುವ ಯೋಚನೆ ಮಾಡಿದ್ದು, ಜೊತೆಗೆ ಪ್ರವಾಸಕ್ಕೂ ಚಿಂತನೆ ನಡೆಸಿ, ಜಗತ್ತಿನ ಏಳು ಅದ್ಭುತ ಸ್ಥಳಗಳಿಗೆ ಭೇಟಿ ಕೊಡುವ ಯೋಚನೆಯಲ್ಲಿದ್ದಾನೆ.