ಹೈದರಾಬಾದ್: ಖಾಸಗಿ ಬಸ್ವೊಂದು ನದಿಗೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಬಳಿ ನಡೆದಿದೆ. ಇಂದು ಬೆಳಿಗ್ಗೆ ಭುವನೇಶ್ವರದಿಂದ ಹೈದರಾಬಾದ್ಗೆ ತೆರಳುತ್ತಿದ್ದ ಬಸ್ ವಿಜಯವಾಡಾ ಬಳಿ ನದಿಗೆ ಬಸ್ ಉರುಳಿ ಬಿದ್ದಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು ಸುಮಾರು 30 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಒಡಿಶಾದಿಂದ ತೆಲಂಗಾಣಕ್ಕೆ ಸುಮಾರು 1 ಸಾವಿರ ಕಿಮೀ ಕ್ರಮಿಸಬೇಕಿದ್ದ ಬಸ್ಸನ್ನು ವಿಜಯವಾಡ ಬಳಿ ನಿಲ್ಲಿಸಿ ಬೇರೊಬ್ಬ ಚಾಲಕ ಬಸ್ ಹತ್ತಿದ್ದರು. ಆದ್ರೆ ಬೆಳಿಗ್ಗೆ 5.30ರ ವೇಳೆಯಲ್ಲಿ ಮುಲ್ಲಪಾಡು ಬಳಿ ಸೇತುವೆಯ ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದು ಮುಂದೆ ಹೋಗಿದ್ದು ಎರಡು ಪಥದ ಮಧ್ಯೆ ಇದ್ದ ಸಂದಿಯಲ್ಲಿ ನದಿಗೆ ಉರುಳಿ ಬಿದ್ದಿದೆ. ಬಸ್ ಕಲ್ವರ್ಟ್ ಮಧ್ಯೆ ಬಿದ್ದು ಸಿಲುಕಿರುವುದರಿಂದ ರಕ್ಷಣಾ ಕಾರ್ಯ ನಿಧಾನವಾಗಿ ಸಾಗಿದೆ. ಹಲವು ಪ್ರಯಾಣಿಕರು ಇನ್ನೂ ಬಸ್ನಲ್ಲೇ ಸಿಲುಕಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ಬಸ್ನ ಭಾಗಗಳನ್ನು ಬೇರ್ಪಡಿಸಿ ಅವರನ್ನು ಹೊರ ತರಲು ಯತ್ನಿಸಲಾಗಿದೆ. ಅತಿ ವೇಗ, ಚಾಲಕನ ನಿದ್ದೆ ಮಂಪರು ಅಪಘಾತಕ್ಕೆ ಕಾರಣ ಎನ್ನಲಾಗಿದೆ.