ಹೊಸದಿಲ್ಲಿ: ಗ್ರಾಹಕರಿಗೆ ಬ್ಯಾಂಕ್ ಗಳು ಹೊಸದೊಂದು ಶಾಕ್ ನೀಡಿದ್ದು, ಇನ್ನು ಮುಂದೆ ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ಹಣ ವಿನಿಮಯ ಹಾಗೂ ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವನ್ನು ನೀಡಿದೆ.
ನಗದು ರಹಿತ ವಹಿವಾಟು ವ್ಯವಸ್ಥೆ ಜಾರಿಯ ಕೇಂದ್ರ ಸರ್ಕಾರದ ಆಂದೋಲನಕ್ಕೆ ಸಾಥ್ ನೀಡಿರುವ ಕೆಲ ಖಾಸಗಿ ಬ್ಯಾಂಕ್ ಗಳು, ತಿಂಗಳಿಗೆ 4 ನಗದು ವ್ಯವಹಾರ ಮಾತ್ರವೇ ಉಚಿತವಾಗಿರಲಿದೆ ಎಂದು ಪ್ರಕಟಿಸಿದೆ. ಡಿಜಿಟಲ್ ಪಾವತಿ ಉತ್ತೇಜನಕ್ಕಾಗಿ ಖಾಸಗಿ ಬ್ಯಾಂಕ್ಗಳು ನಗದು ವಹಿವಾಟಿನ ಮೇಲೆ ಕನಿಷ್ಠ ರೂ.150 ಶುಲ್ಕ ವಿಧಿಸಲು ನಿರ್ಧರಿಸಿವೆ. ಎಚ್ಡಿಎಫ್ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಗಳು ಬುಧವಾರದಿಂದಲೇ ಹೊಸ ನಿಯಮ ಜಾರಿಗೊಳಿಸಿವೆ.
ಗ್ರಾಹಕರು ಇನ್ನು ಮುಂದೆ ತಿಂಗಳೊಂದರಲ್ಲಿ ಬ್ಯಾಂಕ್ ನಲ್ಲಿ ಗರಿಷ್ಠ 4 ಬಾರಿ ಮಾತ್ರ ನಗರು ವ್ಯವಹಾರ (ಹಣ ಜಮಾವಣೆ ಅಥವಾ ಹಿಂಪಡೆತ) ನಡೆಸಬಹುದಾಗಿದೆ. ಇದರ ನಂತರದ ಅಂದರೆ 5ನೇ ವಹಿವಾಟಿಗೆ ರೂ.150 ದಂಡವನ್ನು ಬ್ಯಾಂಕ್ ವಿಧಿಸಲಿವೆ. ಈ ನಿಯಮ ಉಳಿತಾಯ ಮತ್ತು ವೇತನ ಖಾತೆಗಳಿಗೂ ಅನ್ವಯವಾಗಲಿದೆ. ಇದಲ್ಲದೇ ಮೂರನೇ ವ್ಯಕ್ತಿಯೊಂದಿಗೆ ನಡೆಸುವ ನಗದು ವ್ಯವಹಾರಕ್ಕೆ ದಿನವೊಂದಕ್ಕೆ ಗರಿಷ್ಠ ರೂ.25000ದ ಮಿತಿ ಹಾಕಲಾಗಿದೆ. ಇನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಹೋರ್ ಬ್ರ್ಯಾಂಚ್ ನಲ್ಲಿ ಮೊದಲ ನಾಲ್ಕು ನಗದು ವಹಿವಾಟು ಉಚಿತವಾಗಿರಲಿದ್ದು, ನಂತರದ ಪ್ರತಿ ರೂ.1000 ವಹಿವಾಟಿಗೆ ರೂ.5 ರಂತೆ ಕನಿಷ್ಟ ರೂ.150 ದಂಡವನ್ನು ವಿಧಿಸಲಾಗುತ್ತದೆ. ಆದರೆ, ಬೇರೆ ಶಾಖೆಗಳಲ್ಲಿ ಮೊದಲ ವಹಿವಾಟು ಮಾತ್ರವೇ ಉಚಿತವಾಗಿರಲಿದೆ.