ಜೈಪುರ: ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ವಿಶೇಷ ಕೋರ್ಟ್ 2007ರಲ್ಲಿ ರಾಜಸ್ಥಾನದ ಅಜ್ಮೀರದಲ್ಲಿರುವ ದರ್ಗಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಮಾರ್ಚ್ 8 ರಂದು ಎನ್ಐಎ ಕೋರ್ಟ್ ತೀರ್ಪು ನೀಡಿದ್ದು, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭವೇಶ್ ಪಟೇಲ್ ಮತ್ತು ದೇವೇಂದ್ರ ಗುಪ್ತಾ ಹಾಗೂ ಸುನಿಲ್ ಜೋಷಿ ಅವರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಹೇಳಿತ್ತು. ಈ ಪ್ರಕರಣದ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಮತ್ತು ಇತರರನ್ನು ಕೋರ್ಟ್ ಖುಲಾಸೆಗೊಳಿಸಿದ್ದು, ಸುನಿಲ್ ಜೋಷಿ ಈಗಾಗಲೇ ಮೃತಪಟ್ಟಿರುವುದರಿಂದ ಬುಧವಾರ ಕೋರ್ಟ್ ಉಳಿದ ಇಬ್ಬರು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ರಾಜಸ್ಥಾನದ ಎಟಿಎಸ್ ಪ್ರಾರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿತ್ತು. 2011ರ ಏಪ್ರಿಲ್ 6 ರಂದು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಸಂಬಂಧ 149 ಸಾಕ್ಷಿಗಳ ವಿಚಾರಣೆ ಮತ್ತು 451 ಕಡತಗಳನ್ನು ಪರಿಶೀಲಿಸಲಾಗಿದ್ದು, ಎನ್ಐಎ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು.
ಅಜ್ಮೀರದ ಖ್ವಾಜಾ ಮೋಯಿದ್ದೀನ್ ಚಿಸ್ತಿ ದರ್ಗಾದಲ್ಲಿ 2007ರ ಅಕ್ಟೋಬರ್ 11 ರಂದುಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಮೂವರು ಮೃತಪಟ್ಟು, 15 ಜನರು ಗಾಯಗೊಂಡಿದ್ದರು.