ಹೊಸದಿಲ್ಲಿ: ಕೇವಲ ದಾಖಲೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಕಂಪನಿಗಳ ಮೇಲೆ ದೇಶಾದ್ಯಂತ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದ್ದು, 100 ಪ್ರದೇಶದಲ್ಲಿ ಒಟ್ಟಾರೆ 300 ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ.
ದೆಹಲಿ, ಚೆನ್ನೈ, ಕೋಲ್ಕತ್ತಾ, ಚಂಡೀಗಢ, ಪಾಟ್ನಾ, ರಾಂಚಿ, ಅಹಮದಾಬಾದ್, ಭುವನೇಶ್ವರ, ಬೆಂಗಳೂರು ನಗರಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹಾಗೂ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಎಫ್ಇಎಂಎ) ಅಡಿ ದಾಳಿ ನಡೆಸಲಾಗಿದೆ.
ಈ ಕಂಪನಿಗಳ ಮೂಲಕ ಅಪಾರ ಪ್ರಮಾಣದ ತೆರಿಗೆ ವಂಚನೆ, ಹಣಕಾಸು ಅಕ್ರಮ, ಕಪ್ಪುಹಣ ವಹಿವಾಟು ನಡೆಯುತ್ತಿದೆ. ಇಂತಹ ಕಂಪನಿಗಳನ್ನು ಹಾಗೂ ಅವುಗಳ ಅವ್ಯವಹಾರಗಳನ್ನು ಬಯಲಿಗೆಳೆಯಲು ಪ್ರಧಾನಿ ಕಾರ್ಯಾಲಯದ ನಿರ್ದೇಶನದ ಮೇರೆಗೆ ಇಡಿ ಇಲಾಖೆ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿತ್ತು. ಈಗ ವಿಶೇಷ ಕಾರ್ಯಪಡೆ ಸುಮಾರು 300 ಸಂಸ್ಥೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ