ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಕೇಜ್ರಿವಾಲ್ ಅವರು ‘ಮೋದಿ ಫೋಬಿಯಾ’ದಿಂದ ಬಳಲುತ್ತಿದ್ದಾರೆಂದು ಬಿಜೆಪಿ ಕಿಡಿಕಾರಿದೆ.
ಕೇಜ್ರಿವಾಲ್ ಅವರು ಇವಿಎಂ ಯಂತ್ರದ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. 2014ರ ದೆಹಲಿ ಚುನಾವಣೆಯಲ್ಲಿ 67 ಸೀಟುಗಳನ್ನು ಗೆದ್ದಾಗ ನಾವು ಇವಿಎಂನಲ್ಲಿ ದೋಷವಿತ್ತು ಎಂದು ದೂರಿರಲಿಲ್ಲ. ಕೇಜ್ರಿವಾಲ್ ಅವರು ಇದೀಗ ‘ಮೋದಿ ಫೋಬಿಯಾ’ದಿಂದ ಬಳಲುತ್ತಿದ್ದು, ಹೀಗಾಗಿಯೇ ಮೋದಿ ವಿರುದ್ದ ಮಾತನಾಡುತ್ತಿದ್ದಾರೆಂದು ಈ ಕುರಿತಂತೆ ಭಾನುವಾರ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಹೇಳಿದ್ದಾರೆ.
ಹವಾಲಾ ದಂಧೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಸಿಕ್ಕಿಬಿದ್ದಿದ್ದಾಗ ಅವರ ವಿರುದ್ಧ ಕೇಜ್ರಿವಾಲ್ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆಪ್ ಸರ್ಕಾರ ರೂ.97 ಕೋಟಿ ಹಣವನ್ನು ಕೇವಲ ಪ್ರಚಾರಗಳಿಗೆ ಬಳಕೆ ಮಾಡುತ್ತಿದ್ದು, ದೆಹಲಿ ಜನತೆ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು, ಇದರ ಬಗ್ಗೆ ಆಪ್ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.