ಹೊಸದಿಲ್ಲಿ: ಪ್ರತಿ ದಿನ ಐದು ನಗರಗಳಲ್ಲಿ ತೈಲ ಬೆಲೆ ಬದಲಾಗಲಿದ್ದು, ಮೇ 1ರಿಂದ ಈ ಕ್ರಮ ಜಾರಿಯಾಗಲಿದ್ದು, ಮುಂದಿನ ಹಂತದಲ್ಲಿ ದೇಶದಾದ್ಯಂತ ಜಾರಿ ಮಾಡಲು ಉದ್ದೇಶಿಸಲಾಗಿದೆ.
ನಿತ್ಯವೂ ತೈಲ ಬೆಲೆ ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ದೇಶದ 5 ನಗರಗಳಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಕ್ರಮ ಅನುಷ್ಠಾನ ಗೊಳಿಸಲಿವೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಹದಿನೈದು ದಿನಗಳಿಗೊಮ್ಮೆ ಜಾಗತಿಕ ತೈಲ ಮಾರುಕಟ್ಟೆ ಹಾಗೂ ರೂಪಾಯಿ ಮೌಲ್ಯದ ಏರಿಳಿತವನ್ನು ಗಮನಿಸಿ ತೈಲ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲಿ ಶೇ.90ರಷ್ಟು ತೈಲ ಪೂರೈಕೆ ಮಾಡುತ್ತಿವೆ.
3 ತೈಲ ಸಂಸ್ಥೆಗಳ 200 ಕೇಂದ್ರಗಳು ನಿಗದಿಗೊಳಿಸಿರುವ ಐದು ನಗರಗಳಲ್ಲಿದ್ದು, ಹೊಸ ಕ್ರಮದ ಅನುಷ್ಠಾನ ಹಾಗೂ ಆನಂತರದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಮನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಉದಯ್‌ಪುರ್, ಜಮ್‌ಷೆಡ್ಪುರ್, ಪುದುಚೇರಿ, ವೈಝಾಗ್, ಹಾಗೂ ಚಂಡೀಗಢದಲ್ಲಿ ನಿತ್ಯವೂ ತೈಲ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.