ಹೊಸದಿಲ್ಲಿ: ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಬಿಎಸ್ಎಫ್ ಯೋಧರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಈ ವಿಷಯ ಕಾರಣವಾಗಿದ್ದು, ಇದೀಗ ಯೋಧನನ್ನು ಹುದ್ದೆಯಿಂದ ವಜಾಮಾಡಲಾಗಿದೆ.
‘ಅಶಿಸ್ತಿನ’ ಕಾರಣ ನೀಡಿ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಬಿಎಸ್ಎಫ್ ಮೂಲಗಳ ಪ್ರಕಾರ ಬಿಎಸ್ಎಫ್ ಕಾಯ್ದೆ ಮತ್ತು ನಿಯಮಗಳ ಅನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ತೇಜ್ ಬಹದ್ದೂರ್ ಯಾದವ್ ಅವರು ಫೇಸ್ಬುಕ್ನಲ್ಲಿ ಬಿಎಸ್ಎಫ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಹಾಕಿದ್ದ ವಿಡಿಯೊ ವೈರಲ್ ಆಗಿದ್ದು, ಪ್ರಧಾನಿ ಕಾರ್ಯಾಲಯವು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಬಿಎಸ್ಎಫ್ ಕಡೆನಿಂದ ವರದಿ ಕೇಳಿತ್ತು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವಿಡಿಯೊ ವೈರಲ್ ಆಗುತ್ತಿದ್ದಂತೆ ಯೋಧರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ತಿಳಿಸಿದ್ದರು.