ಹೊಸದಿಲ್ಲಿ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿರುವ ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿಯಿಂದಾಗಿ ದೇಶಕ್ಕೆ ಬರೊಬ್ಬರಿ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ತಜ್ಞರು ಅಭಿಪ್ರಾಯಪಟ್ಟಿರುವಂತೆ ಜಿ.ಎಸ್.ಟಿ ಜಾರಿಗಿಂತ ಮೊದಲು ಅಂತರ್ ರಾಜ್ಯ ತೆರಿಗೆ ವ್ಯವಸ್ಥೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯದ ಚೆಕ್ಪೋಸ್ಟ್ ಗಳಲ್ಲಿ ಲಾರಿಗಳು ಹೆಚ್ಚು ಹೊತ್ತು ನಿಂತು ಸಾಗುತ್ತಿದ್ದವು. ಇದರಿಂದ ಸಮಯ ಮತ್ತು ಇಂಧನ ವ್ಯಯವಾಗುತ್ತಿತ್ತು.
ಜಿ ಎಸ್ ಟಿ ಜಾರಿಯಿಂದ ರಾಜ್ಯ ಚೆಕ್ ಪೋಸ್ಟ್ ಗೇಟ್ ಗಳನ್ನು ಮುಚ್ಚಲಾಗಿದ್ದು, ಪ್ರತಿ ವರ್ಷ ಪರೋಕ್ಷವಾಗಿ ಉಂಟಾಗುತ್ತಿದ್ದ ಇಂಧನ ನಷ್ಟಕ್ಕೆ ತಡೆ ಬೀಳಲಿದೆ. ಚೆಕ್ಪೋಸ್ಟ್ ಗಳಲ್ಲಿ ಲಾರಿಗಳ ತಪಾಸಣೆ ವಿಳಂಬದಿಂದ ಭಾರತದ ಆರ್ಥಿಕತೆಗೆ ಪರೋಕ್ಷವಾಗಿ 900-2300 ಕೋಟಿ ರು. ನಷ್ಟ ಉಂಟಾಗುತ್ತಿದೆ ಎಂದು 2005ರ ವಿಶ್ವಬ್ಯಾಂಕ್ ವರದಿ ತಿಳಿಸಿತ್ತು.
ಜಿ ಎಸ್ ಟಿ ಜಾರಿಗೊಂಡ ತಕ್ಷಣದಿಂದಲೇ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಗಡಿ ಚೆಕ್ಪೋಸ್ಟ್ ಗಳನ್ನು ಮುಚ್ಚಿದ್ದು, ಇತರೆ ರಾಜ್ಯಗಳೂ ಕೂಡ ಶೀಘ್ರದಲ್ಲೇ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದ್ದು, ಸರಕು ಸಾಗಾಣಿಕಾ ವಾಹನಗಳು ತಡೆಯಿಲ್ಲದೇ ಚಲಿಸಬಹುದಾಗಿದೆ. ಇದರಿಂದ ದೇಶಕ್ಕೆ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ನೂತನ ತೆರಿಗೆ ವ್ಯವಸ್ಥೆಯಿಂದಾಗಿ ಇ-ವೇ ಬಿಲ್ ಸೌಲಭ್ಯ ಚಾಲ್ತಿಯಲ್ಲಿದ್ದು, ಈ ರೀತಿಯ ಬಿಲ್ ಗಳು 1 ರಿಂದ 15 ದಿನಗಳ ಅವಧಿಯ ಮಾನ್ಯತೆ ಹೊಂದಿರುತ್ತವೆ. ಈ ಬಿಲ್ ಗಳೊಂದಿಗೆ ದಿನಕ್ಕೆ 100 ಕಿ.ಮೀ ನಂತೆ ಚಲಿಸಿದರೂ 15 ದಿನಕ್ಕೆ 1 ಸಾವಿರ ಕಿ.ಮೀ ದೂರದ ಪ್ರಯಾಣ ಮಾಡಬಹುದು. ತೆರಿಗೆ ಅಧಿಕಾರಿಗಳು ಇ-ವೇ ಬಿಲ್ ಗಳ ಮೂಲಕ ಸರಕು-ಸಾಗಾಣಿಕಾ ವಾಹನಗಳನ್ನು ಪರೀಕ್ಷಿಸಬಹುದಾಗಿದೆ. ಇ-ವೇ ಬಿಲ್ ಗಾಗಿ ಸಂಸ್ಥೆಗಳು ಆನ್ ಲೈನ್ ನಲ್ಲಿ ತಮ್ಮ ತಮ್ಮ ಸಂಸ್ಥೆಗಳ ನೋಂದಣಿ ಮಾಡಿಸಿಕೊಳ್ಳಬೇಕಿರುತ್ತದೆ ಎಂದು ಕಂದಾಯ ಕಾರ್ಯದರ್ಶಿ ಹಾಸ್ಮುಖ್ ಆದಿಯಾ ತಿಳಿಸಿದ್ದಾರೆ.