ಕೊಲ್ಕತ್ತಾ: ಗೋಮಾಂಸ ಸೇವನೆ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿರುವ ಹೊತ್ತಿಗೆ ಬಿಜೆಪಿ ನೇತಾರರೊಬ್ಬರು ಮೇಕೆಯನ್ನೂ ‘ಮಾತೆ’ ಪಟ್ಟಿಗೆ ಸೇರಿಸಿ ಅಚ್ಚರಿಯುಂಟು ಮಾಡಿದ್ದಾರೆ.
ಮಹಾತ್ಮ ಗಾಂಧೀಜಿಯವರು ಮೇಕೆ ಹಾಲು ಕುಡಿಯುತ್ತಿದ್ದುದರಿಂದ ಅದನ್ನು ಮಾತೆ ಎಂದಿದ್ದರು. ಹಾಗಾಗಿ ಹಿಂದೂಗಳು ಮೇಕೆಯನ್ನು ತಿನ್ನುವುದನ್ನು ಬಿಡಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಟ್ವೀಟಿಸಿದ್ದಾರೆ. ಈ ಮೂಲಕ ಅಚ್ಚರಿಯನ್ನು ಹುಟ್ಟು ಹಾಕಿಸಿದ್ದಾರೆ.
ಗಾಂಧೀಜಿ ಅವರು ಕೊಲ್ಕತ್ತಾದ ವುಡ್ಬರ್ನ್ ಪಾರ್ಕ್ ನಲ್ಲಿರುವ ನನ್ನ ತಾತ ಸರತ್ ಚಂದ್ರ ಬೋಸ್ ಅವರ ಮನೆಯಲ್ಲಿ ವಾಸವಾಗಿದ್ದಾಗ ಅಲ್ಲಿ ಮೇಕೆ ಹಾಲನ್ನೇ ಸೇವಿಸುತ್ತಿದ್ದರು. ಹಿಂದೂಗಳ ರಕ್ಷಕನಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಅವರು ಮಾತೆ ಎಂದು ತಿಳಿದುಕೊಂಡಿದ್ದರು. ಹಾಗಾಗಿ ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು ಎಂದು ಬೋಸ್ ಟ್ವೀಟ್ ಮಾಡಿದ್ದಾರೆ.